ವಿಜಯನಗರ : ಈಗಾಗಲೇ ರಾಜ್ಯ ರಾಜಕಾರಣದಲ್ಲಿ ನವೆಂಬರ್ಗೆ ಸಿಎಂ ಬದಲಾವಣೆ ಆಗಲಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಫಿಕ್ಸ್ ಎಂಬ ಮಾತು ಕೇಳಿಬರುತ್ತಿವೆ.
ಇನ್ನೊಂದೆಡೆ ಸಿಎಂ ಬದಲಾವಣೆ ಚರ್ಚೆ ವಿಚಾರ ಬಂದಾಗಲೆಲ್ಲಾ ಸಿಎಂ ಸಿದ್ದರಾಮಯ್ಯ ಅವರು ದಲಿತ ಸಿಎಂ ಕೂಗು ಮುನ್ನೆಲೆಗೆ ತಂದು ಬಿಡುವ ಚಾಣಾಕ್ಷ ಎಂದು ಬಿಜೆಪಿ ಜರಿದಿದೆ.
ನವೆಂಬರ್ ವರೆಗೆ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರು ಸಿಎಂ ಆಗುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಭವಿಷ್ಯ ನುಡಿದ್ದದ್ದು ಗೊತ್ತೇ ಇದೆ.
ಇದೀಗ ಸಿಎಂ ಬಣದ ನಾಯಕರಾದ ಸಚಿವ ಸತೀಶ್ ಜಾರಕಿಹೊಳ್ಳಿ ಅವರು ಸಿಎಂ ಬದಲವಾವಣೆ ವಿಷಯದ ಕುರಿತಾಗಿ ಹೊಸಪೇಟೆಯಲ್ಲಿ ಮಗದೊಮ್ಮೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಚಿವ ಸ್ಥಾನವನ್ನೇ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ.
ಹೀಗಿರುವಾಗ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆಯೇ ಎಂದು ಪ್ರಶ್ನೆ ಕೇಳಿದರೆ ಏನು ಹೇಳಲಿ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರು.
ಸಿಎಂ ಬದಲಾಗ್ತಾರೆ ಎಂದು ನಾವು ಇಲ್ಲಿ ಕುಳಿತು ಹೇಳಲು ಆಗಲ್ಲ, ಬೆಂಗಳೂರಿಗೆ ಬಂದು ಕೇಳಿ ಎಂದರಲ್ಲದೇ, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಂಬ ಚರ್ಚೆಯೇ ಮುಗಿದು ಹೋಗಿರುವ ಅಧ್ಯಾಯ. ಈ ಬಗ್ಗೆ ಮುಂದೆ ಯೋಚಿಸಿ ಮಾತನಾಡುವುದು ಸೂಕ್ತ ಎಂದರು.
ಇನ್ನು ದಲಿತ ಸಚಿವರಾಗಲಿ, ಶಾಸಕರಾಗಿ ಸಭೆ ಸೇರುವುದು ಸಿಎಂ ಬದಲಾವಣೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಮುಂದೆಯೂ ನಾವು ಸಭೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿ ಬದಲಾವಣೆ ಯಾವುದೇ ಪ್ರಸ್ತಾವ ಸರ್ಕಾರ ಅಥವಾ ಹೈಕಮಾಂಡ್ ಮುಂದಿಲ್ಲ. ವಿಶ್ವನಾಥ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಯಾವಾಗ ಆ ವಿಷಯ ತಿಳಿಸಿದೆಯೋ ನನಗೆ ಕಿಂಚಿತ್ತೂ ಗೊತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಆಗಿಯೇ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.