ರಾಮದುರ್ಗ : ಅತಿ ಶೀಘ್ರದಲ್ಲಿ ರಾಮದುರ್ಗ ಟು ಧಾರವಾಡ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕು ಇಲ್ಲವಾದರೆ ಸತ್ಯಾಗ್ರ ಖಚಿತ ಲೋಕಾಪುರದಿಂದ ರಾಮದುರ್ಗ ಮುಖಾಂತರ ಧಾರವಾಡಕ್ಕೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ, ರೈಲು ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ರಾಮದುರ್ಗ ಮುಖಾಂತರ ಧಾರವಾಡಕ್ಕೆ ಶೀಘ್ರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ ಮುಖಾಂತರ ಉಭಯ ಸರಕಾರಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ತಹಶೀಲ್ದಾರ್ ಮೂಲಕ ಕೇಂದ್ರದ ರೈಲ್ವೆ ಸಚಿವ, ರಾಜ್ಯದ ರಾಜ್ಯಪಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಈ ಭಾಗದ ಜನತೆಯ ಬೇಡಿಕೆ ಈಡೇರಿಸಲು ಉಭಯ ಸರಕಾರಗಳು ಆಸಕ್ತಿ ಹೊಂದಿಲ್ಲ.
ರಾಮದುರ್ಗ ತಾಲೂಕಿನಲ್ಲಿ ರೈಲ್ವೆ ಹೋರಾಟಗಾರರ ಒತ್ತಾಯದ ಮೇರೆಗೆ 2019ರಲ್ಲಿ ಹೊಸ ರೈಲು ಮಾರ್ಗಕ್ಕಾಗಿ ಸರ್ವೆ ಕಾರ್ಯ ನಡೆಸಿದ ಕೇಂದ್ರ ಸರಕಾರ ಕಾಮಗಾರಿ ಆರಂಭಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 2019ರ ನಂತರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಜನರ ಬೇಡಿಕೆಗೆ ಉಭಯ ಸರಕಾರಗಳು ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟದೊಂದಿಗೆ ತಾಲೂಕಾ ಆಡಳಿತ ಕಚೇರಿ, ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನ್ಯಾಷನಲ್ ಹೋಮನ್ ರೈಟ್ಸ್ ರಾಜ್ಯಾಧ್ಯಕ್ಷ ಹಾಗೂ ರೈಲು ಹೋರಾಟ ಸಮಿತಿಯ ಬಸೀರಅಹ್ಮದ ಬೈರಕದಾರ, ನ್ಯಾಯವಾದಿ ಜಿ.ಬಿ. ಅಮಟೂರ, ಮೋಹನ ಸೋರಿ, ಎಸ್.ಕೆ. ಪಾಟೀಲ, ರಾಜು ಹರ್ಲಾಪೂರ, ರೈತ ಮುಖಂಡ ಜಗದೀಶ ದೇವರಡ್ಡಿ, ಬಸವರಾಜ ಗುರಡ್ಡಿ, ದಾದಾಪೀರ ಹಾಜಿ, ಮಂಜುನಾಥ ಮಾದರ, ಬಿ.ಎಲ್. ಸಂಕನಗೌಡ್ರ, ಲಕ್ಷ್ಮಣ್ ರಾಯಬಾಗ, ದುರ್ಗಪ್ಪ ಬನ್ನಿಗಿಡ , ಇನ್ನು ಅನೇಕ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವರದಿ : ಮಂಜುನಾಥ ಕಲಾದಗಿ




