Ad imageAd image

ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ರೈತರ ಆಹೋರಾತ್ರಿ ಧರಣಿ ಸತ್ಯಾಗ್ರಹ

Bharath Vaibhav
ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ರೈತರ ಆಹೋರಾತ್ರಿ ಧರಣಿ ಸತ್ಯಾಗ್ರಹ
WhatsApp Group Join Now
Telegram Group Join Now

ಬೈಲಹೊಂಗಲ: ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ, ನಾನಾ ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಬ್ಬು ಬೆಳೆಗಾರರು ಪಟ್ಟಣದ ಚನ್ನಮ್ಮ ಆಶ್ವಾರೂಢ ಮೂರ್ತಿ ಎದುರು ಸೋಮವಾರದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಧರಣಿಯಲ್ಲಿ ರೈತರು ಭಜನೆ, ಡೊಳ್ಳು ನಾದ, ಪದಗೀತೆಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿದರು. ಈ ವೇಳೆ ನ್ಯಾಯವಾದಿ ಶಶಿಧರ ಚಿಕ್ಕೋಡಿ ಅವರು ಅಕ್ಕಿ ಪಾಕೆಟುಗಳು ಸೇರಿದಂತೆ ನಾನಾ ಕಿರಾಣಿ ವಸ್ತುಗಳನ್ನು ದೇಣಿಗೆಯಾಗಿ ನೀಡಿದರು.ನೇಗಿಲ ಯೋಗಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳಣ್ಣವರ ಅವರು, ಹೋರಾಟಕ್ಕೆ ಬೇಕಾದ ಸಕಲ ವ್ಯವಸ್ಥೆ ಕಲ್ಪಿಸಿದರು

ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, “ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ರೈತರ ಹೋರಾಟಕ್ಕೆ ನಾನು ಸದಾ ಬೆಂಬಲಿಯಾಗಿರುತ್ತೇನೆ,” ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹೇಳಿದರು, “ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಹಾಗಾದರೆ ಮತ್ತೆ ಹೊಸ ಕಾರ್ಖಾನೆಗಳನ್ನು ಏಕೆ ಆರಂಭಿಸುತ್ತಿದ್ದಾರೆ? ಇದು ರೈತರನ್ನು ದಿಕ್ಕುತಪ್ಪಿಸುವ ರಾಜಕೀಯ ಆಟ,” ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತು ರೈತರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಕರೆ ನೀಡಿದರು.

ನೇಗಿಲ ಯೋಗಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳಣ್ಣವರ, ರೈತ ಮುಖಂಡರು ರವಿ ಪಾಟೀಲ, ಬೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಶಿವಾನಂದ ಸರದಾರ, ಸುರೇಶ ಸಂಪಗಾಂವ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಕಮತ, ಬಸನಗೌಡ ಪಾಟೀಲ, ಸೋಮಲಿಂಗಪ್ಪ ಮೆಳ್ಳಿಕೇರಿ ಸೇರಿದಂತೆ ಹಲವರು ಮಾತನಾಡಿ, “ಪ್ರತಿ ಟನ್ ಕಬ್ಬಿಗೆ ₹3500 ದರ ಘೋಷಣೆ ಮಾಡುವವರೆಗೆ ಹೋರಾಟ ನಿಲ್ಲದು,” ಎಂದು ಹೇಳಿದರು.

ಜಿಲ್ಲೆಯಲ್ಲಿ 28 ಸಕ್ಕರೆ ಕಾರ್ಖಾನೆಗಳಿದ್ದರೂ ಯಾವುದೇ ಕಾರ್ಖಾನೆ ರೈತರ ಬೇಡಿಕೆಯಂತೆ ದರ ಘೋಷಣೆ ಮಾಡಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಧರಣಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ನೇಗಿಲ ಯೋಗಿ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ರೈತ ಮಹಾಸಂಘ, ಸ್ವಾಭಿಮಾನ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಧರಣಿಗೆ ಬೆಂಬಲ ನೀಡಿದವು.

ಗಣ್ಯರಿಂದ ಬೆಂಬಲ: ಧರಣಿಗೆ ಶಾಸಕರಾದ ಮಹಾಂತೇಶ ಕೌಜಲಗಿ, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರು ಮಹಾಂತೇಶ ದೊಡಗೌಡರ, ಚಿತ್ರನಟ ಶಿವರಂಜನ್ ಬೋಳಣ್ಣವರ, ಮಾಜಿ ಸಚಿವ ಶಶಿಕಾಂತ ನಾಯಕ, ನ್ಯಾಯವಾದಿಗಳ ಸಂಘದ ಸದಸ್ಯರು, ಅನೇಕ ಗಣ್ಯರು ಹಾಗೂ ಜನಪ್ರತಿನಿಧಿಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ವರದಿ: ದುಂಡಪ್ಪ ಹೂಲಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!