ತುರುವೇಕೆರೆ: ಜಿಲ್ಲೆಯ ಪ್ರಸಿದ್ಧ ಆರ್.ಆರ್. ಮೆಲೋಡಿ ಸಂಸ್ಥೆಯು ತುರುವೇಕೆರೆಯ ಜೆ.ಕೆ.ಕಂಫರ್ಟ್ಸ್ ನಲ್ಲಿ ಸವಿಗಾನ ಸಂಗೀತ ಕರೋಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಹಾಗೂ ಜಾನಪದ ಕಲಾವಿದ ಈಶ್ವರದಲ, ಮನಸ್ಸನ್ನು ಶೀಘ್ರವಾಗಿ ಪ್ರಫುಲ್ಲಗೊಳಿಸುವಲ್ಲಿ ಸಂಗೀತ ಸಹಕಾರಿಯಾಗಿದೆ. ವ್ಯಕ್ತಿಯ ಏಕಾಗ್ರತೆ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಗೀತ ಪ್ರಮುಖ ಅಸ್ತ್ರವಾಗಿದೆ ಎಂದರು.

ಆರ್.ಆರ್. ಮೆಲೋಡಿ ಸಂಸ್ಥೆಯ ರಮ್ಯಾಈಶ್ವರ್ ಮಾತನಾಡಿ, ಸಂಗೀತಕ್ಕೆ ಪುಟಾಣಿ ಮಕ್ಕಳಿಂದ ಹಿರಿಯವರೆಗೆ ಎಲ್ಲರನ್ನೂ ಆಕರ್ಷಿಸುವ ಮಹಾನ್ ಶಕ್ತಿ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತ ಚಿಕಿತ್ಸೆ ಎಂಬ ವಿಧಾನವೂ ಸಹ ಇದೆ. ಅಂತಹ ಸಂಗೀತ ಎಲ್ಲರ ಮನಸ್ಸಿಗೆ ಮುದ ನೀಡುವುದಲ್ಲದೆ ನಾವೂ ಹಾಡುವುದನ್ನು ಕಲಿಯಬೇಕೆಂಬ ಆಸೆಯನ್ನು ಸಹ ಹುಟ್ಟುಹಾಕುತ್ತದೆ ಎಂದರು.
ಆರ್.ಆರ್. ಮೆಲೋಡಿ ಸಂಸ್ಥೆಯು ಯಾವುದೇ ಆರ್ಕೆಸ್ಟ್ರಾ ತಂಡವಲ್ಲ. ಸಂಗೀತದ ಆಸಕ್ತಿಯುಳ್ಳ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಂಗೀತ ಸವಿಯನ್ನು ಉಣಬಡಿಸಿ, ಕರೋಕೆ ಮೂಲಕ ಹಾಡುವ ಸಂಗೀತಾಸಕ್ತಿಯನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಸಹೋದರರಾದ ಸಂಸ್ಥೆಯ ಹೆಗ್ಗೆರೆ ರಾಮಚಂದ್ರ ಅವರ ಪರಿಶ್ರಮ, ಸಹಕಾರದಿಂದ ಜಿಲ್ಲೆಯಾದ್ಯಂತ ಸವಿಗಾನ ಸಂಗೀತ ಕರೋಕೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಪ್ರಿಯರು ಪಾಲ್ಗೊಂಡು ತಾವೂ ಸಹ ನಮ್ಮೊಂದಿಗೆ ಹಾಡುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ್ದಾರೆಂದರು.
ಈ ಸಂದರ್ಭದಲ್ಲಿ ಚಿತ್ರನಟ ಕಿಶೋರ್ ದಲ, ಆರ್.ಆರ್.ಮೆಲೋಡಿಯ ಹಾಗೂ ಕಾರ್ಯಕ್ರಮ ಆಯೋಜಕ ಹೆಗ್ಗೆರೆ ರಾಮಚಂದ್ರ, ತುರುವೇಕೆರೆಯ ಶಶಿನಾಗರಾಜ್, ವಾಸವಿ ಸತೀಶ್, ತುಮಕೂರಿನ ಬಸವರಾಜ್, ಚಿಕ್ಕನಾಯಕನಹಳ್ಳಿಯ ಗಂಗಾಧರ್, ತಿಪಟೂರಿನ ರಾಜೇಶ್ವರಿ ಸೇರಿದಂತೆ ಸಂಗೀತಾಸಕ್ತರು ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




