ಅಲಿಘಡ(ಉತ್ತರ ಪ್ರದೇಶ): ಕೋಟ್ಯಂತರ ರೂಪಾಯಿ ಬಾಕಿ ತೆರಿಗೆ ಕಟ್ಟಲು ಸೂಚಿಸಿ ಜ್ಯೂಸ್ ಮಾರಾಟಗಾರ, ಬೀಗ ರಿಪೇರಿ ಮಾಡುವ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ ಬಳಿಕ, ಇದೀಗ ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್‌ಬಿಐ)ದಲ್ಲಿ ಕಸ ಗುಡಿಸುವ ಕಾರ್ಮಿಕನ ಸರದಿ!.
ಉತ್ತರ ಪ್ರದೇಶದ ಅಲಿಘಡದ ಚಂದೌಸ್ ಪ್ರದೇಶದ ಎಸ್‌ಬಿಐ ಶಾಖೆಯಲ್ಲಿ ನೈರ್ಮಲ್ಯ ಕಾರ್ಮಿಕನಾದ (ಸ್ವೀಪರ್) ಕರಣ್ ಕುಮಾರ್ ವಾಲ್ಮೀಕಿ ಅವರ ಮನೆಗೆ 33.88 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.
ಕಸ ಗುಡಿಸುವ ಕರಣ್ ಕುಮಾರ್ ವಾಲ್ಮೀಕಿ ಅವರ ಮಾಸಿಕ ವೇತನ ಕೇವಲ 14,200 ರೂಪಾಯಿ. ಇದರಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟ. ಅಂಥದ್ದರಲ್ಲಿ 33.88 ಕೋಟಿ ರೂಪಾಯಿ ತೆರಿಗೆ ಬಾಕಿ ನೋಟಿಸ್ ನೋಡಿ ಮನೆಯವರು ಹೌಹಾರಿದ್ದಾರೆ.
ಪ್ಯಾನ್ ಕಾರ್ಡ್ ದುರ್ಬಳಕೆ: ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಕರಣ್ ಕುಮಾರ್, “ತಮ್ಮ ಹೆಸರಿನ ಪ್ಯಾನ್ಕಾರ್ಡ್ ದುರ್ಬಳಕೆಯಾಗಿದೆ. ನಮ್ಮದು ಬಡಕುಟುಂಬ. ಸಹೋದರನೂ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಶಕ್ತಿ ನಮ್ಮಲ್ಲಿಲ್ಲ” ಎಂದು ಹೇಳಿದ್ದಾರೆ.
“ಪಿತ್ರಾರ್ಜಿತವಾಗಿರುವ ಮನೆಯಲ್ಲಿ ವಾಸವಿದ್ದೇವೆ. ನಮ್ಮ ಬಳಿ ದೊಡ್ಡ ಆಸ್ತಿಯೂ ಇಲ್ಲ. ತಮ್ಮ ಪ್ಯಾನ್ಕಾರ್ಡ್ ಅನ್ನು ಮೂರು ಸ್ಥಳಗಳಲ್ಲಿ ಕೊಟ್ಟಿದ್ದೇನೆ. ದೆಹಲಿಯ ಸಿಮೆಂಟ್ ಕಂಪನಿ, ಆರ್‌ಸಿಎಂ ಕಂಪನಿ ಮತ್ತು ಬ್ಯಾಂಕಿನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಸಂಬಳ ನೀಡುವ ಸಲುವಾಗಿ ಪ್ಯಾನ್ಕಾರ್ಡ್ ಪಡೆದಿದ್ದಾರೆ. ಈ ಸ್ಥಳಗಳಲ್ಲಿ ಒಂದರಲ್ಲಿ ನನ್ನ ದಾಖಲೆ ದುರುಪಯೋಗವಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.