ದಾವಣಗೆರೆ: ಸೇಬು ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಅಂದರೆ ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಈಶಾನ್ಯ ಪ್ರದೇಶಗಳಲ್ಲಿ ‘ಆ್ಯಪಲ್’ ಹೆಚ್ಚು ಬೆಳೆಯುವ ಬೆಳೆ. ಆದರೆ ಈ ಸೇಬು ಬೆಳೆಯನ್ನು ಬಯಲು ಸೀಮೆಯ ಮಣ್ಣಿನಲ್ಲಿ ಬೆಳೆಯಬಹುದೆಂದು ರೈತನೋರ್ವ ತೋರಿಸಿಕೊಟ್ಟಿದ್ದಾರೆ.
ಬರಡು ಭೂಮಿಯೇ ಹೆಚ್ಚಿರುವ ಜಗಳೂರಿನಲ್ಲಿ ಆ್ಯಪಲ್ ಬೆಳೆದು ರೈತ ಹುಬ್ಬೇರಿಸುವ ಸಾಧನೆ ಮಾಡಿದ್ದಾನೆ. ಸೇಬು ಸಸಿ ಹಾಕಿದ್ದು, ಈಗಾಗಲೇ ಗೊಂಚಲು ಗೊಂಚಲು ಸೇಬು ಕಾಯಿಗಳು ಬಿಟ್ಟಿವೆ. ಇನ್ನೇನು ಮೇ ತಿಂಗಳ ಕೊನೆಯಲ್ಲಿ ರೈತನಿಗೆ ಭರಪೂರ ಫಸಲು ಸಿಗಲಿದೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ನಿವಾಸಿ ರೈತ ರುದ್ರಮುನಿ ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೂಡಲಮಾಚಿಕೆರೆ ಗ್ರಾಮದ ತಮ್ಮ 1.25 ಎಕರೆ ಜಮೀನಿನಲ್ಲಿ ಮೂರು ತಳಿಯ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ. ಜಮೀನಿನಲ್ಲಿ ಒಟ್ಟು 550 ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿ ನಾಟಿ ಮಾಡಿ 17 ತಿಂಗಳು ಉರುಳಿದ್ದು, ಈಗಾಗಲೇ ಗೊಂಚಲು ಕಾಯಿ ಬಿಟ್ಟಿದೆ.
500 ಕೆಜಿ ಫಸಲಿನ ನಿರೀಕ್ಷೆ: ರೈತ ರುದ್ರಮುನಿ, “ಬೆಳೆದಿರುವ ಸೇಬು ಕೈ ಹಿಡಿಯಲಿದೆ. ಮೇ ಅಂತ್ಯಕ್ಕೆ ಕಟಾವು ಮಾಡಲಾಗುತ್ತದೆ. ಬರೋಬ್ಬರಿ 500 ಕೆ.ಜಿ ಫಸಲಿನ ನಿರೀಕ್ಷೆ ಇದೆ. ಒಂದು ಕೆಜಿಗೆ ನೂರು ರೂಪಾಯಿ ಯಂತೆ ಬೆಲೆ ಸಿಗಬಹುದು. 1.25 ಎಕರೆಯಲ್ಲಿ ಆ್ಯಪಲ್ ಬೆಳೆದಿದ್ದೇನೆ. 550 ಗಿಡ ಹಾಕಿದ್ದು, ಜ್ಯೋತಿಪ್ರಕಾಶ್ ಎಂಬುವರ ನರ್ಸರಿಯಿಂದ ಸಸಿ ತರಲು 1.25 ಲಕ್ಷ, ಸಸಿ ಹಾಕಲು 25 ಸಾವಿರ ರೂ. ಖರ್ಚಾಗಿದೆ. ಇದಕ್ಕೂ ಫಂಗಸ್ ರೋಗ ಬರುತ್ತದೆ. ಗಿಡ ಮೇಲಿಂದ ಒಣಗಿಕೊಂಡು ಬರುವುದೇ ಫಂಗಸ್. ಡಿಸೆಂಬರ್ ಚಳಿಗಾಲದಲ್ಲಿ ವೇಳೆ ಬ್ರೂನಿಂಗ್ (ಕಟಿಂಗ್) ಮಾಡುತ್ತೇವೆ. ಬಳಿಕ ಅದು ಫ್ಲವರಿಂಗ್ ಆಗುತ್ತದೆ. ಕಾಯಿ ಆಗಿ ಮೇ ತಿಂಗಳು ಕೊನೆಯಲ್ಲಿ ಫಸಲು ಬರಲಿದೆ. ನಮಗೆ ಒಂದು ಕೆ.ಜಿಗೆ ನೂರು ರೂಪಾಯಿ ಸಿಗಬಹುದೆಂದು ಅಂದಾಜು ಇದೆ” ಎಂದರು.
ಇಸ್ರೇಲ್ ತಳಿ ಸೇರಿ ಮೂರು ತಳಿಯ ಸೇಬು ಬೆಳೆ: ರೈತ ರುದ್ರಮುನಿ ಯೂಟ್ಯೂಬ್ ನೋಡಿ ಈ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ. ಒಟ್ಟು ಮೂರು ರೀತಿ ತಳಿಯ ಸೇಬು ಬೆಳೆದಿದ್ದಾರೆ. “ಹೆಚ್ಆರ್ ಎಮ್ಎನ್ ಹಿಮಾಚಲ ಪ್ರದೇಶ ತಳಿ, ಅದರ ಮಧ್ಯೆ ಡೋರ್ ಸೆಟ್ ಗೋಲ್ಡ್ ತಳಿ ಹಾಕಿದ್ದೇವೆ. ಇದರಲಿ ಇಸ್ರೇಲ್ನ ಅಣ್ಣ ವೆರೆಟಿ, ಹೆಚ್ಆರ್ ಎಮ್ ಎನ್ 99, ಡೋರ್ ಸೆಟ್ ಗೋಲ್ಡ್ ಬೆಳೆಯಲಾಗಿದೆ. ಇನ್ನು ಹೆಚ್ಆರ್ ಎಮ್ಎನ್, ಡೋರ್ ಸೆಟ್ ಗೋಲ್ಡ್ ಭಾರತೀಯ ತಳಿ ಆಗಿವೆ. ಅಣ್ಣ ಮಾತ್ರ ಇಸ್ರೇಲ್ ತಳಿಯಾಗಿದೆ” ಎಂದು ತಿಳಿಸಿದರು.
ಮೇಘಾಲಯದಲ್ಲಿ ಬೆಳೆಯುವ ಸೇಬು ಬೆಳೆದು ಯಶಸ್ವಿ: “ಮೇಘಾಲಯ, ಕಾಶ್ಮೀರದಲ್ಲಿ ಬೆಳೆಯುವ ಸೇಬಿಗೆ ಹೆಚ್ಚಿಗೆ ನೀರು ಬೇಕಾಗುತ್ತದೆ. ಕೊಳವೆ ಬಾವಿ ಮೂಲಕ ನಾಲ್ಕು ದಿನಕ್ಕೊಮ್ಮೆ ನೀರು ಕೊಡುತ್ತಾ ಬಂದಿದ್ದೇವೆ. ಒಂದು ಗಿಡ 40 ವರ್ಷ ಬರಬಹುದಾ ಎಂದು ಕೆಲವರು ಹೇಳಿದ್ದರು. ಆದರೆ ನಾವು 25 ವರ್ಷ ಬಾಳಿಕೆ ಬರಬಹುದು ಎಂದು ಅಂದಾಜಿಸಿದ್ದೇವೆ. ಒಂದು ವರ್ಷಕ್ಕೆ ಎರಡು ಫಸಲು ಬರಲಿದೆ ಎಂಬ ನಿರೀಕ್ಷೆ ಇದೆ” ಎಂದು ರೈತ ಹೇಳಿದರು.
ಅವರ ಪತ್ನಿ ಭಾರತಿ ಅವರು ಪ್ರತಿಕ್ರಿಯಿಸಿ, “ಪರವಾಗಿಲ್ಲ ಒಳ್ಳೆ ಫಸಲು ಬಂದಿದೆ. ಮುಂದಿನ ದಿನಗಳಲ್ಲಿ ಗಿಡ ಬೆಳೆಯುತ್ತಿದ್ದಂತೆ ಇನ್ನೂ ಉತ್ತಮ ಫಸಲು ಬರಲಿದೆ. ಇಬ್ಬರು ಕೆಲಸ ಮಾಡುತ್ತಿದ್ದೇವೆ. ನಮ್ಮ ವಾತಾವರಣದಲ್ಲಿ ಬೆಳೆಯುವುದು ಸವಾಲಿನ ಕೆಲಸ. ಬೆಳಿಯಬೇಕೆಂಬುದು ನಮ್ಮ ಛಲ. ನೂರಾರು ಗಿಡಿ ಹಾಕಿದ್ದೇವೆ. ಕೆಲಸ ಮಾಡಲು ಕೂಲಿ ಕಾರ್ಮಿಕರು ಕೊರತೆ ಇದೆ. ಕೆಲಸ ಮಾಡುವುದು ನಮ್ಮದು ಫಸಲು ಕೊಡುವುದು ಬಿಡುವುದು ದೇವರಿಗೆ ಬಿಟ್ಟ ವಿಚಾರ” ಎಂದರು.
ಗಿಡಕ್ಕೆ ಬೇವಿನ ಹಿಂಡಿ, ಹೊಂಗೆ ಹಿಂಡಿ, ಹಸು ಕುರಿ ಗೊಬ್ಬರ: ಸೇಬು ಬೆಳೆಗೆ ರೈತ ಬೇವಿನ, ಹೊಂಗೆ ಹಿಂಡಿ, ಹಸು, ಕುರಿ ಗೊಬ್ಬರ ಹಾಕಿ ಪೋಷಣೆ ಮಾಡುತ್ತಿದ್ದಾರೆ. ಅಲ್ಲದೆ ಜೀವಾಮೃತ ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಮೂರ್ನಾಲ್ಕು ಜನ ಕೂಲಿ ಕೆಲಸಗಾರರು ಗಿಡಗಳಿಗೆ ಕೆಂಪು ಮಣ್ಣು ಗೊಬ್ಬರ ಕೊಡುತ್ತಿದ್ದಾರೆ. ಆದರೆ ಹೆಚ್ಚಿನ ಕೂಲಿ ಕಾರ್ಮಿಕರು ಸಿಗದೆ ಇರುವುದು ರೈತನಿಗೆ ತಲೆಬಿಸಿಯಾಗಿ ಪರಿಣಮಿಸಿದೆ.