ಜಮುಯಿ (ಬಿಹಾರ್) : ಒಬ್ಬ ವ್ಯಕ್ತಿ ಏನನ್ನಾದರೂ ಮಾಡುವ ಉತ್ಸಾಹವನ್ನು ಹೊಂದಿರುವಾಗ, ಯಾವುದೇ ಕಷ್ಟವೂ ಅವರನ್ನು ತಡೆಯುವುದಿಲ್ಲ ಎಂಬುದು ಅಕ್ಷರಶಹ ನಿಜ. ಜಮುಯಿಯ ಬರ್ಹತ್ ಬ್ಲಾಕ್‌ನ ನುಮಾರ್ ಪಂಚಾಯತ್‌ನ ಮಹಾದಲಿತ್ ಟೋಲಾ ಕಟ್ಕಾ ಗ್ರಾಮದ ಯುವತಿ ಸೀಮಾ ಎಂಬುವವರು ಇದನ್ನು ನಿಜ ಎಂದು ಸಾಬೀತುಪಡಿಸಿದ್ದಾರೆ. ಸೀಮಾ ತನ್ನ ಗ್ರಾಮದ ಮೊದಲ ಪದವೀಧರ ಮತ್ತು ಎಎನ್‌ಎಂ ಆಗಿದ್ದು ಮಾತ್ರವಲ್ಲದೇ, ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಶ್ರಮಿಸಿ ಯಶಸ್ವಿಯಾಗಿದ್ದಾರೆ.
ವೈದ್ಯೆಯಾಗಲು ಬಯಸಿದ್ದ ಸೀಮಾ : ಮುಸಾಹರ್ ಸಮುದಾಯದ ಜನರು ಕೂಲಿ ಕೆಲಸ ಮಾಡುತ್ತಾರೆ. ಇಲ್ಲಿನ ಹುಡುಗಿಯರು ತಮ್ಮ ಬಾಲ್ಯದಲ್ಲಿಯೇ ಮದುವೆಯಾಗುತ್ತಾರೆ. ನನಗೆ ವೈದ್ಯೆ ಆಗಬೇಕು ಎಂಬ ಆಸೆಯಿದ್ದರೂ ನರ್ಸ್ ಆಗಿ ಜನರ ಸೇವೆ ಮಾಡುತ್ತಿದ್ದೇನೆ. ತನಗೆ ಸಮಾಜಕ್ಕೆ ಏನಾದರೂ ಮಾಡುವ ಸಾಮರ್ಥ್ಯ ಬಂದರೆ ಮಾತ್ರ ಮದುವೆಯಾಗುವುದಾಗಿ ತನ್ನ ಮನೆಯವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸೀಮಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ನಮ್ಮ ಸಮಾಜದಿಂದ ಬರುವ ಬಹುತೇಕರು ಕಷ್ಟಪಟ್ಟು ಕೂಲಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಯಾರೂ ಹೆಚ್ಚು ಕಲಿಸುವುದಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಮದುವೆ ಮಾಡುತ್ತಾರೆ. ನನ್ನ ತಂದೆಯೂ ನನಗೆ 12ನೇ ವರ್ಷಕ್ಕೆ ಮುಂಚಿತವಾಗಿಯೇ ಮದುವೆ ಮಾಡಬೇಕೆಂದುಕೊಂಡಿದ್ದರು. ಮನೆಗೆ ಸಂಬಂಧವೂ ಬಂದಿತ್ತು. ಆದರೆ, ನಾನು ಈಗಲೇ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದೆ” ಎಂದಿದ್ದಾರೆ ನರ್ಸ್ ಸೀಮಾ.
ಕುಟುಂಬದವರ ಬೆಂಬಲ : ಓದುವ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಮಾಜದ ಕೆಲವರು ನನ್ನ ವಿರುದ್ಧ ಹರಿಹಾಯ್ದರು. ಆದರೆ, ನಾನು ಅಲ್ಲಿಗೆ ಸುಮ್ಮನಾಗಲಿಲ್ಲ. ನಾನು ನಮ್ಮ ಕುಟುಂಬದಿಂದ, ವಿಶೇಷವಾಗಿ ತಂದೆಯಿಂದ ಸಂಪೂರ್ಣ ಬೆಂಬಲವನ್ನು ಪಡೆದೆ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್: ಸೀಮಾ ಅವರು ನಗರದ ಖ್ಯಾತ ವೈದ್ಯ, ಮಕ್ಕಳ ತಜ್ಞ ಡಾ. ಎಸ್. ಎನ್ ಝಾ ಅವರನ್ನ ಸಂಪರ್ಕಿಸಿ ನಂತರ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡರು. ಪ್ರಸ್ತುತ ಸೀಮಾ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಗ್ರಾಮದ ಜನರಿಗೆ ಹಾಗೂ ಸಮೀಪದ ಗ್ರಾಮಗಳಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.