ಸಿರುಗುಪ್ಪ : ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಿರಸ್ತೆದಾರ ಸಿದ್ದಾರ್ಥ್ ಕಾರಂಜಿ ಅವರು ಮಾತನಾಡಿ ತಾಲೂಕಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕಿದೆ.
ಎರಡು ದಿನಗಳ ಕಾಲ ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಮತ್ತು ನಗರದಲ್ಲಿರುವ ಮಹನೀಯರ ವೃತ್ತಗಳಲ್ಲಿ ವಿದ್ಯುತ್ ದ್ವೀಪಾಲಂಕಾರ ಮಾಡಬೇಕೆಂದರು.
ಕ್ರೀಡಾಂಗಣದಲ್ಲಿನ 100 ಅಡಿಯ ಧ್ವಜಸ್ತಂಭಕ್ಕೆ ಬೆಳಿಗ್ಗೆ 6ಕ್ಕೆ ಶಾಸಕರು ಧ್ವಜಾರೋಹಣ ನೆರವೇರಿಸುವರು, ತಾಲೂಕು ಕಛೇರಿಯಲ್ಲಿ 7:30ಕ್ಕೆ ಧ್ವಜಾರೋಹಣ ಮಾಡಲಾಗುತ್ತದೆ.
ಎಲ್ಲಾ ಶಾಲಾ ಕಾಲೇಜುಗಳಲ್ಲಿ 8ಕ್ಕೆ ಧ್ವಜಾರೋಹಣ ನೆರವೇರಿಸಿ 8:30ಕ್ಕೆ ವಿದ್ಯಾರ್ಥಿಗಳೊಂದಿಗೆ ಕ್ರೀಡಾಂಗಣದಲ್ಲಿರಲು ಸೂಚಿಸಿದರು.
ಇನ್ನಿತರ ಪೂರ್ವಸಿದ್ದತೆಯ ಅಗತ್ಯತೆ ಕುರಿತು ತಹಶೀಲ್ದಾರರು ನಿಮ್ಮೊಂದಿಗೆ ಮತ್ತೊಮ್ಮೆ ಸಭೆಗೆ ಕರೆದಾಗ ಆಗಲೂ ಹಾಜರಾಗಬೇಕೆಂದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದ ಜತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲು ತಿಳಿಸಲಾಯಿತು.
ಅಂದು ಜರುಗಲಿರುವ ಧ್ವಜವಂದನೆ, ವೇದಿಕೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಆಯಾ ಇಲಾಖೆಗಳಿಗೆ ಜವಾಬ್ದಾರಿಯನ್ನು ವಹಿಸಲಾಯಿತು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ದೈಹಿಕ ಶಿಕ್ಷಕರು ಇದ್ದರು.
ವರದಿ: ಶ್ರೀನಿವಾಸ ನಾಯ್ಕ




