ಬೆಂಗಳೂರು: ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮ್‌ಸುಂದರ್ ಅವರು ಅನಾರೋಗ್ಯದಿಂದಾಗಿ ಸೋಮವಾರ (ಏ. 14) ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ಯಾಮ್‌ಸುಂದರ್ ಅವರನ್ನು ಬೆಂಗಳೂರಿನ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರು ಶಾಮಿ ಎಂದೇ ಜನಪ್ರಿಯರಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ಸರಿಸುಮಾರು 39 ವರ್ಷ ಅನುಭವ ಹೊಂದಿದ್ದ ಶ್ಯಾಮ್‌ಸುಂದರ್ ಅವರು ಡಿಜಿಟಲ್ ಮಾಧ್ಯಮ ಜಗತ್ತಿಗೆ ಹಿಸದೊಂದು ದಿಕ್ಕು ತೋರಿಸಿದವರು. 1991ರಿಂದ 2000ರ ವರೆಗೆ ಕನ್ನಡ ಪ್ರಭ ದಿನಪತ್ರಿಕೆಯ ಪುರವಣಿ ಸಂಪಾದಾಕರಾಗಿ ಸೇವೆ ಸಲ್ಲಿಸಿದ್ದರು.
ಕಸ್ತೂರಿ ಮಾಸಿಕ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ವಿಭಾಗ, ಒನ್ ಇಂಡಿಯಾ ಕನ್ನಡ ಸುದ್ದಿ ಮಾಧ್ಯಮ, ಪಬ್ಲಿಕ್ ಟಿವಿ ಮುಂತಾದ ಸಂಸ್ಥೆಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು. ಏಷ್ಯನ್ ಕಾಲೇಜು ಆಫ್ ಬೆಂಗಳೂರಿನಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು. ಶ್ಯಾಮ್‌ಸುಂದರ್ ಅವರು 2012-13ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.