ಬೆಂಗಳೂರು:ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಪಕ್ಷಬೇಧ ಮರೆತು ಗಂಭೀರ ಚರ್ಚೆಗೆ ಎಡೆಮಾಡಿಕೊಟ್ಟಿತು. ಶಾಸಕ ಕೌಜಲಗಿ ಮಹಂತೇಶ್ ಶಿವಾನಂದ್ ಅವರ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ
ಪ್ರತಿಪಕ್ಷಗಳ ಸದಸ್ಯರು ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಂತೆ ಆಗ್ರಹಿಸಿದರು.
ಉತ್ತರ ನೀಡಿದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ವ್ಯಕ್ತಿಗಳು ಸ ಲಾಭಕ್ಕಾಗಿ ಅನ್ಯಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಪ್ರಕರಣಗಳು ಗಮನಕ್ಕೆ ಬಂದಿವೆ. ನಿಯಂತ್ರಣ ಮಾಡುವ ಕೆಲಸವನ್ನು ಇಲಾಖೆಯಿಂದ ಮಾಡುತ್ತಿದ್ದೇವೆ. ಕಾನೂನು ಉಲ್ಲಂಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಅಕ್ರಮ ಮದ್ಯ ಮಾರಾಟದಿಂದ ವಿದ್ಯಾರ್ಥಿಗಳು ಮದ್ಯವ್ಯಸನಿಗಳಾಗುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆಯಿಂದ ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ.
ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ಮಾರ್ಗಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ಗಸ್ತಿನ ಸಂದರ್ಭದಲ್ಲಿ ಮಹಿಳೆಯರು, ಮಹಿಳಾ ಸಂಘಗಳು ಸಾರ್ವಜನಿಕರಿಂದ ದೂರು ಸ್ವೀಕೃತವಾದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ಅಕ್ರಮ ಕಂಡುಬಂದಲ್ಲಿ ಅಬಕಾರಿ ನಿಯಮಗಳ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.