ಗಂಗಾವತಿ: ಅನಾರೋಗ್ಯ ಪೀಡಿತ ಮಗುವಿಗೆ ಅಗರಬತ್ತಿಯಿಂದ ಸುಟ್ಟರೆ, ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ತಾಯಿಯೊಬ್ಬಳು ಮಾಡಿದ ಕೈ ಚಿಕಿತ್ಸೆಯ ಪರಿಣಾಮ ಮಗು ಮೃತಪಟ್ಟಿರುವ ವರದಿಯಾಗಿದೆ. ಮಗು ಮೃತಪಟ್ಟಿರುವ ಹಿನ್ನೆಲೆ ಇದೀಗ ತಾಯಿಯ ಮೇಲೆ ಎಫ್ಐಆರ್ ದಾಖಲಾಗಿದೆ.
ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಏಳು ತಿಂಗಳ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ತಾಯಿಯ ವಿರುದ್ಧ ಇದೀಗ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ಮರಣೋತ್ತರ ಶವ ಪರೀಕ್ಷೆ ನಡೆಸಿದ ವೇಳೆ, ಅಲ್ಲಿನ ವೈದ್ಯರು ಸುಟ್ಟಗಾಯಗಳಿಂದ ನಂಜಾಗಿ ಮಗು ಸಾವನ್ನಪ್ಪಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ್ ಎಂಬುವವರು ನೀಡಿದ ದೂರಿನ ಮೆರೆಗೆ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ?: ಕಳೆದ ನವಂಬರ್ ಅಂದರೆ 2024ರಲ್ಲಿ ಗ್ರಾಮದ ಏಳು ತಿಂಗಳ ಮಗುವಿಗೆ ಅನಾರೋಗ್ಯ ಕಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಾಯಿಲೆ ವಾಸಿಯಾಗಿರಲಿಲ್ಲ. ಹೀಗಾಗಿ ಮಗುವಿಗೆ ಅಗರಬತ್ತಿಯ ಬೆಂಕಿಯಿಂದ ಬಿಸಿ ಮಾಡಿದರೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ಆಲಿಸಿದ ತಾಯಿ, ಅದನ್ನು ಪ್ರಯೋಗ ಮಾಡಿದ್ದಾರೆ. ಹೀಗಾಗಿ ಮಗುವಿಗೆ ಸುಟ್ಟಗಾಯಗಳಿಂದ ನಂಜಾಗಿ ಸಾವನ್ನಪ್ಪಿದೆ ಎಂದು ಗೊತ್ತಾಗಿದೆ.
ಅಗರಬತ್ತಿಯಿಂದ ಸುಟ್ಟಿದ್ದಕ್ಕೆ ನಂಜಾಗಿ ಮಗು ಮೃತಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿದ್ದರು. ಜಿಲ್ಲಾ ಮಟ್ಟದ ಶಿಶುಮರಣ ಪರಿಶೀಲನಾ ಸಭೆಯ ವೇಳೆ ಈ ವಿಷಯ ಗಮನಕ್ಕೆ ಬಂದ್ದು, ಇದೀಗ ತಾಯಿ ಮೇಲೆ ದೂರು ದಾಖಲಾಗಿದೆ.



