ಇಸ್ಲಾಮಾಬಾದ್: ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಇಂಧನ ಬಿಕ್ಕಟ್ಟು ಉಂಟಾಗಿದೆ. ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಹೊರ್ಮುಜ್ ಜಲಸಂಧಿ ಮುಚ್ಚಿರುವುದೇ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಸರ್ಕಾರದ ಹೊಸ ಆದೇಶದಂತೆ, ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಶೇಕಡ 42.7ರಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹458ಕ್ಕೆ ತಲುಪಿದೆ.
ಡೀಸೆಲ್ ದರದಲ್ಲಿ ಶೇಕಡ 54.9ರಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ ₹520 ಆಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಜನಸಾಮಾನ್ಯರ ಮೇಲೆ ಭಾರಿ ಹೊರೆಯಾಗಿ ಪರಿಣಮಿಸಿದೆ.
ಇಂಧನ ಬೆಲೆ ಏರಿಕೆ ವಿರೋಧಿಸಿ ಕರಾಚಿಯಲ್ಲಿ ನೂರಾರು ವಾಹನ ಸವಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪೆಟ್ರೋಲ್-ಡೀಸೆಲ್ ಜತೆಗೆ ಸಿಲಿಂಡರ್ ಬೆಲೆ ಏರಿಕೆಯೂ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ ದಿನಕೂಲಿ ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರಿದೆ ಎಂದು ನಾಗರಿಕರೊಬ್ಬರು ಬೇಸರ ಹೊರಹಾಕಿದ್ದಾರೆ.




