ಮೈಸೂರು: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕನೋರ್ವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿವಮೂರ್ತಿ ಬಂಧಿತ ಶಿಕ್ಷಕ.
ಘಟನೆ ನಡೆದರೂ ಇಲಾಖೆಯ ಗಮನಕ್ಕೆ ತರದ ಹಾಗೂ ತಡ ಮಾಡಿದ ಆರೋಪದಲ್ಲಿ ಶಾಲಾ ಮುಖ್ಯ ಶಿಕ್ಷಕನ ವಿರುದ್ದವೂ ಪ್ರಕರಣ ದಾಖಲಾಗಿದೆ. ಶಿಕ್ಷಕ ಶಿವಮೂರ್ತಿ 20 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯರೇ ಶಾಲಾ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು ಮಹಿಳಾ ಶಿಕ್ಷಕಿಯ ಮೂಲಕ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರೂ, ಶಾಲೆಯ ಮುಖ್ಯ ಶಿಕ್ಷಕ ಕ್ರಮ ತೆಗೆದುಕೊಳ್ಳದೇ ಸುಮ್ಮನಿದ್ದ ಕಾರಣ ಅವರ ವಿರುದ್ಧವೂ ದೂರು ದಾಖಲಾಗಿದೆ.
ಕಿರುಕುಳಕ್ಕೆ ಒಳಾಗದ ವಿದ್ಯಾರ್ಥಿನಿಯರು ಮಕ್ಕಳ ಸಹಾಯವಾಣಿ ಮೂಲಕ ಈ ವಿಚಾರ ತಿಳಿಸಿದ್ದು, ತಕ್ಷಣ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಡಿಡಿಪಿಐಗೆ ವಿಚಾರ ತಿಳಿಸಿದ್ದಾರೆ. ಡಿಡಿಪಿಐ ಜವರೇಗೌಡ ಅವರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅವರಿಗೆ ಮಾಹಿತಿ ನೀಡಿದ್ದು, ಅವರು ಪರಿಶೀಲನೆ ನಡೆಸಿ ವಿಜಯನಗರ ಪೊಲೀಸ್ ಠಾಣಾಗೆ ತೆರಳಿ ಶಿಕ್ಷಕ ಶಿವಮೂರ್ತಿ ಹಾಗೂ ಮುಖ್ಯ ಶಿಕ್ಷಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಈ ದೂರಿನನ್ವಯ ಕೂಲಂಕಷ ತನಿಖೆ ನಡೆಸಲಾಗಿದ್ದು, ಶಿಕ್ಷಕ ಶಿವಮೂರ್ತಿತನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.