ತುರುವೇಕೆರೆ: ಶೈಕ್ಷಣಿಕ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ತಿಳಿಸಿದರು.
ತಾಲ್ಲೂಕಿನ ಆನೆಕೆರೆ ಕ್ಲಸ್ಟರ್ ನ ತೊರೆಮಾವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಿರಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಶೇ..5 ರಷ್ಟು ಕೃಪಾಂಕ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಕಲ್ಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ನುರಿತ ತಜ್ಞ ಶಿಕ್ಷಕರು, ಉಚಿತ ಶಿಕ್ಷಣ, ಗುಣಮಟ್ಟದ ಬೋಧನೆ, ಅಕ್ಷರ ದಾಸೋಹ, ಆಂಗ್ಲಭಾಷಾ ಕಲಿಕೆಗೆ ಆದ್ಯತೆ, ಮಕ್ಕಳಲ್ಲಿನ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ಎಲ್ಲವೂ ಸರ್ಕಾರಿ ಶಾಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ ಎಂದರು.
ಸ್ಪರ್ಧಾತ್ಮಕ ಪ್ರಪಂಚದಲ್ಲಿ ಆಂಗ್ಲಭಾಷೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೋಷಕರು ಆಂಗ್ಲಭಾಷಾ ಶಿಕ್ಷಣಕ್ಕೆಂದೇ ಬೇರೆ ಶಾಲೆಗೆ ಮಕ್ಕಳನ್ನು ದಾಖಲಿಸುವ ಅಗತ್ಯವಿಲ್ಲ, ಸರ್ಕಾರಿ ಶಾಲೆಗಳಲ್ಲೇ ಉತ್ತಮ ಆಂಗ್ಲಭಾಷಾ ಜ್ಞಾನ ದೊರೆಯಲಿದೆ ಎಂದ ಅವರು, ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯವಾದುದನ್ನು ಸಾಧಿಸಿ ನಮಗೆಲ್ಲಾ ಆದರ್ಶ ವ್ಯಕ್ತಿಗಳಾಗಿರುವುದು ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆಂಬುದನ್ನು ಪೋಷಕರು ಮರೆಯಬಾರದು. ಹಣದ ಉಳಿತಾಯದ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತದೆ. ನಿಮ್ಮೂರ ಶಾಲೆಯನ್ನು ಉಳಿಸಿ ಬೆಳೆಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾಳೆ ಕೃಷ್ಣಪ್ಪ ಮಾತನಾಡಿ, ಉಚಿತ ಶಿಕ್ಷಣ, ಸಮವಸ್ತ್ರ, ಬಿಸಿಯೂಟ ಯೋಜನೆ, ವಿದ್ಯಾರ್ಥಿ ವೇತನ ಸೇರಿದಂತೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅಗತ್ಯವಾದ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದ್ದು ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಮಕ್ಕಳ ಬದುಕನ್ನು ಸುಂದರವಾಗಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಲು ಸಹಕಾರ ನೀಡಬೇಕೆಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳು, ಅಂಗನವಾಡಿಯ ಪುಟಾಣಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರನ್ನು ರಂಜಿಸಿದರು. ಗ್ರಾಪಂ ಉಪಾಧ್ಯಕ್ಷೆ ರೇಖಾದೇವರಾಜು, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪ್ರಶಾಂತ್, ನೌಕರರ ಸಂಘದ ನಿರ್ದೇಶಕ ಲೋಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಬಸವರಾಜು, ಲೋಕೇಶ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ, ಹಾಲು ಉತ್ಪಾದರ ಸಂಘದ ಅಧ್ಯಕ್ಷ ನಿಜಗುಣಪ್ಪ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಮಲ್ಲೇಶ್, ಉಪನ್ಯಾಸಕ ಡಾ.ಚಂದ್ರಯ್ಯ, ಯಾದವ ಮುಖಂಡ ಶಂಕರಪ್ಪ, ಮುಖಂಡರಾದ ಅಶ್ವಥಪ್ಪ, ಕುಮಾರಸ್ವಾಮಿ, ನರೇಂದ್ರ, ಮುಖ್ಯಶಿಕ್ಷಕ ಲಕ್ಷ್ಮೀಂದ್ರ, ಸಹ ಶಿಕ್ಷಕರಾದ ಸವಿತ, ಅಜಯ್, ಸರ್ವಮಂಗಳ, ಅಂಗನವಾಡಿ ಕಾರ್ಯಕರ್ತೆ ಪದ್ಮ, ಸಹಾಯಕಿ ಮಮತ ಸೇರಿದಂತೆ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




