ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿ ತನ್ನ ಹೆಂಡತಿಯ ನಡವಳಿಕೆಗಳಿಂದ ಬೇಸರಗೊಂಡು ಆಕೆಯನ್ನು ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಬೂಜನ ಹಳ್ಳಿ ಗ್ರಾಮದ ಸಚಿನ್ (26) ಪೊಲೀಸರಿಗೆ ಶರಣಾಗಿರುವ ಆರೋಪಿ ಪತಿ.
“ಈತ ಆರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಪವಿತ್ರಾ (26)ಳನ್ನು ತನ್ನ ಮನೆಯವರ ಸಮ್ಮುಖದಲ್ಲಿ ಸಚಿನ್ ಸರಳ ವಿವಾಹವಾಗಿದ್ದ. ಆಕೆಯ ನಡವಳಿಕೆ ಬಗ್ಗೆ ಶಂಕೆಯಿಂದ ತಾನೇ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಹೇಳಿ ಪತಿ ಸಚಿನ್, ಬಿಳಿಕೆರೆ ಪೊಲೀಸ್ ಠಾಣೆಗೆ ಶುಕ್ರವಾರ ಸಂಜೆ ಶರಣಾಗಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪವಿತ್ರಾಳ ಮೃತದೇಹವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.