ಬೆಳಗಾವಿ : ಬಿಜೆಪಿಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಸೋಲಿಗೆ ತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಈಗ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಸದಾನಂದಗೌಡ ಒಂದು ಕಡೆ, ಈಶ್ವರಪ್ಪ ಒಂದು ಕಡೆ, ಇನ್ನೂ ಬೇರೆ ಬೇರೆ ಆಗಿದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು.
ಇಂದು ಅಥಣಿಯ ಶಿವಯೋಗಿ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಚುನಾವಣೆ ಗೆಲುವಿಗೆ ತಂತ್ರ-ಪ್ರತಿತಂತ್ರಗಳನ್ನು ರೂಪಿಸಬೇಕು.
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಮತ್ತು ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸಗಳನ್ನು ಜನರಿಗೆ ತಲುಪಿಸಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಹೇಗೆ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ವಿವರಿಸಿದರು.
ಎರಡು ದಿನಗಳ ಹಿಂದೆ ಸಚಿವರು ಪೂರ್ವಭಾವಿ ಸಭೆಯನ್ನು ಶಿವಯೋಗಿ ನಾಡು ಅಥಣಿಯಿಂದಲೇ ಮಾಡೋಣ ಎಂದಿದ್ರು. ಯಾವುದೇ ಪಕ್ಷದ ಮೊದಲ ಸಭೆ ಅಥಣಿಯಿಂದ ಆರಂಬಿಸಿದ್ರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗುತ್ತೆ ಅನ್ನೋ ನಂಬಿಕೆಯಿದೆ. ಹೀಗೆ ಅಥಣಿಯಲ್ಲಿ ಪೂರ್ವಭಾವಿ ಸಭೆ ಈಶಾನ್ಯ ದಿಕ್ಕಿನಿಂದ ಎಂದರು.
ಪ್ರಿಯಾಂಕಾ ಜಾರಕಿಹೊಳಿಗೆ ಭಾಷಣದ ಕೊರತೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸವದಿ, ನನಗೂ ಕೂಡ 2004ರಲ್ಲಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ. ಅನುಭವ ನಂತರ ಮಾತನಾಡುವುದನ್ನು ಕಲಿತೆ. ಮೋದಿಯವರಿಗೂ ಚಿಕ್ಕವರು ಇದ್ದಾಗ ಮಾತನಾಡೋಕೆ ಬರುತ್ತಿರಲಿಲ್ಲ. ಈಗ ಅನುಭವದಿಂದ ಮಾತನಾಡ್ತಾರೆ.
ಇನ್ನು ಜಗದೀಶ್ ಶೆಟ್ಟರ್ ಬೆಳಗಾವಿ ಬಿಜೆಪಿ ಅಭ್ಯರ್ಥಿಯಾಗಿರುವ ವಿಚಾರ ಪ್ರಸ್ತಾಪಿಸಿ, ಶೆಟ್ಟರ್ ಬೆಳಗಾವಿ ಬಂದಿದ್ದಾರೆ ಲೋಕಸಭಾ ಚುನಾವಣೆ ನಂತರ ಮತ್ತೆ ಹುಬ್ಬಳ್ಳಿಗೆ ಹೋಗುತ್ತಾರೆ ಎನ್ನುವ ಮೂಲಕ ಬಿಜೆಪಿ ಅಭ್ಯರ್ಥಿ ಸೋಲು ಖಚಿತ ಎಂದರು.
ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಿಗೆ 55 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗಿದೆ.
ಅಥಣಿ ಪೂರ್ವಭಾಗದ ಜನರು ಬರಗಾಲದಿಂದ ಬಳಲುತ್ತಿದ್ದರು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ಈ ಅಥಣಿ ಜನರ ನೀರಿನ ಬರ ನೀಗಿಸಿದ್ದಾರೆ ಎಂದರು.