ಹಾವೇರಿ: ಆರ್‌ಟಿಸಿ ಉತಾರ (ಪಹಣಿ) ದುರಸ್ತಿಗೆ 12 ಸಾವಿರ ಲಂಚ ಪಡೆಯುವ ವೇಳೆ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಹಾನಗಲ್ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ನವೀನ್ ಪಾಟೀಲ್ ಎಂಬುವವರ ಆರ್‌ಟಿಸಿ ಉತಾರ ದುರಸ್ತಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, 12 ಸಾವಿರ ಲಂಚ ಪಡೆಯುವ ವೇಳೆ ಮೂವರು ನೌಕರರು ಸಿಕ್ಕಿಬಿದ್ದಿದ್ದಾರೆ.
ಹಾನಗಲ್ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ತಮ್ಮಣ್ಣ ಕಾಂಬಳೆ, ಎಸ್‌ಡಿಎ ಗುಳಪ್ಪ ಮನಗುಳಿ, ಕೃತ್ಯಕ್ಕೆ ಸಹಕರಿಸಿದ್ದ ಎಸ್‌ಡಿಎ ಶಿವಾನಂದ ಬಡಿಗೇರ್ ಎಂಬುವವರನ್ನು ಲೋಕಾಯುಕ್ತ ಪೊಲೀಸ್ ದಸ್ತಗಿರಿ ಮಾಡಿದ್ದಾರೆ. ಹಾವೇರಿ ಲೋಕಾಯುಕ್ತರು ಇವರನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
ನವೀನ ಅವರ ಕೆಲಸ ಮಾಡಿಕೊಡುವ ಮುನ್ನ ಶನಿವಾರದಂದು ಹಾನಗಲ್ ತಹಸೀಲ್ದಾರ್ ಕಚೇರಿಯಲ್ಲಿ ಹಣ ಪಡೆದುಕೊಳ್ಳುವ ಸಮಯದಲ್ಲಿ, ಹಾವೇರಿ ಲೋಕಾಯುಕ್ತ ಪೊಲೀಸ್ ತಂಡ ಪುರಾವೆ ಸಮೇತ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಮೂವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




