ಸಿರುಗುಪ್ಪ : ಶಿವರಾತ್ರಿ ನಿಮಿತ್ತ ತಾಲೂಕಿನ ವಿವಿಧೆಡೆ ಶಿವ ದೇಗುಲಗಳಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಿ ವಿವಿಧ ಆಭರಣಗಳು, ಫಲಪುಷ್ಪಗಳಿಂದ ಅಲಂಕರಿಸಿ, ಬಿಲ್ವಾರ್ಚನೆ, ಭಸ್ಮಾರ್ಚನೆ ಶಿವನಾಮ ಸ್ಮರಣೆಯೊಂದಿಗೆ ಮಹಾಶಿವರಾತ್ರಿ ಅದ್ದೂರಿಯಾಗಿ ಜರುಗಿತು.
ಮಹಾಶಿವರಾತ್ರಿಯಂದು ಪ್ರಾತಃಕಾಲದಲ್ಲಿ ಎದ್ದು ಸ್ನಾನ ಮಾಡಿ ಮಡಿ ವಸ್ತ್ರ ತೊಟ್ಟು, ಉಪವಾಸ ವ್ರತ ಕೈಗೊಂಡು ಶಿವಾಲಯಗಳಿಗೆ ತೆರಳಿ ಶಿವನನ್ನು ಭಜಿಸುವುದರೊಂದಿಗೆ ರಾತ್ರಿಯಿಡೀ ಜಾಗರಣೆ ಮಾಡಿ ಶಿವಾರ್ಚನೆ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರವಾಗಿ ಸುಖ: ಶಾಂತಿ, ನೆಮ್ಮದಿ ದೊರೆಯುತ್ತದೆಂಬುದು ನಂಬಿಕೆಯಾಗಿದೆ.

ನಗರದ ಶ್ರೀ ಅಮೃತೇಶ್ವರ ಹಾಗೂ ಶ್ರೀ ನೀಲಕಂಠೇಶ್ವರ, ಶ್ರೀ ಶಂಭುಲಿಂಗೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ನಗರೇಶ್ವರ, ಕಾಶಿ ವಿಶ್ವನಾಥ, ಕೊಟ್ಟೂರೇಶ್ವರ, ಕಾಳಿಕಾ ಕಮಠೇಶ್ವರ, ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.
ಗುಡಿ ಗೋಪುರಗಳು ಬಾಳೆಕಂಬ, ಮಾವಿನ ತೋರಣ ಹಾಗೂ ಅಲಂಕೃತ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದವು.
ದರ್ಶನಕ್ಕೆ ಬಂದಿದ್ದ ಭಕ್ತಾದಿಗಳಿಗೆ ಆಯಾ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳಿಂದ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವರದಿ : ಶ್ರೀನಿವಾಸ ನಾಯ್ಕ




