ಬೆಂಗಳೂರು : ವಿಜಯಪುರ ಜಿಲ್ಲೆಯಲ್ಲಿ ರಾಜಕೀಯ ಮಹತ್ವದ ಬೆಳವಣಿಗೆ ಎಂಬಂತೆ ಸಚಿವ ಶಿವಾನಂದ ಎಸ್ ಪಾಟೀಲ್ ಮತ್ತು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರ ಸವಾಲಿನ ಫೈಟ್ ಒಂದು ಹಂತಕ್ಕೆ ಈಗಾಗಲೇ ತಲುಪಿದೆ. ಯತ್ನಾಳ್ ಸವಾಲು ಸ್ವೀಕರಿಸಿ ರಾಜೀನಾಮೆ ಪತ್ರವನ್ನು ಸ್ಪೀಕರ್ ಅವರಿಗೆ ಶಿವಾನಂದ ಪಾಟೀಲ್ ಸಲ್ಲಿಸಿದ್ದು ಗೊತ್ತೇ ಇದೆ.
ರಾಜೀನಾಮೆ ಪತ್ರದಲ್ಲಿ ಏನಿದೆ?
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಅವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಯತ್ನಾಳ್ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಲಿ. ಇಲ್ಲ ಅವರ ಕ್ಷೇತ್ರಕ್ಕೆ ನಾನೇ ಬಂದು ಕಣಕ್ಕೆ ಇಳಿಯುವೆ ಎಂದು ಶಿವಾನಂದ ಪಾಟೀಲ್ ಅವರು ಮರು ಸವಾಲು ಹಾಕಿದ್ದಾರೆ.
ಮುಂದುವರಿದು.. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸನವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ.
ಆದ್ದರಿಂದ ಯತ್ನಾಳ್ ಅವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ. ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಸ್ಪೀಕರ್ ಅವರಿಗೆ ಪತ್ರದಲ್ಲಿ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ.
ಅವರಪ್ಪನಿಗೆ ಹುಟ್ಟಿದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂದು ಯತ್ನಾಳ್ ಹಾಕಿದ್ದ ಸವಾಲನ್ನು ಶಿವಾನಂದ ಪಾಟೀಲ್ ಸ್ವೀಕರಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೇ ಬಿಟ್ಟಿದ್ದಾರೆ.




