ಮಕರ ಸಂಕ್ರಮಣದ ಅಂಗವಾಗಿ ನಟ ಶಿವರಾಜ್ ಕುಮಾರ್ ಇರುಮುಡಿ ಹೊತ್ತು ಶ್ರೀ ಅಯ್ಯಪ್ಪ ಸ್ವಾಮಿ ದರ್ಶನವನ್ನು ಪಡೆದರು. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮಾಲೆ ಧರಿಸಿ, ಇರುಮುಡಿ ಹೊತ್ತು ದೇವಾಲಯಕ್ಕೆ ಭೇಟಿ ನೀಡಿದರು.
ಬುಧವಾರ ಕರ್ನಾಟಕದ ಶಬರಿಮಲೆ ಎಂದೇ ಖ್ಯಾತವಾಗಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದರು.
ದೇವರ ದರ್ಶನದ ಬಳಿಕ ದೇವಾಲಯದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ ಸ್ಥಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ದಂಪತಿ ಪಾಲ್ಗೊಂಡರು.
ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವಿಶೇಷ ಎಂದರೆ ಅಲ್ಲಿ ಸಂಕ್ರಾಂತಿ ದಿನದಂದು ಗರುಡ ದರ್ಶನವಾಗುತ್ತದೆ. ಇದನ್ನು ವೀಕ್ಷಣೆ ಮಾಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ.
ಇಂದು ಸಹ ಶಿವರಾಜ್ ಕುಮಾರ್ ದಂಪತಿಗಳು ಗರುಡ ದರ್ಶನ ಪಡೆದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ, ಅಯ್ಯಪ್ಪ ಸ್ವಾಮಿಯ ದಿವ್ಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು, ಆಶೀರ್ವಾದ ಪಡೆದರು.
ಬೆಜ್ಜವಳ್ಳಿಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶ್ವ ಸಂತೋಷ ಭಾರತಿ ಗುರೂಜಿ ನೇತೃತ್ವದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಅವಧೂತ ವಿನಯ್ ಗುರೂಜಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪನ ಪೂಜೆಗೂ ಮುನ್ನ ಮೆರವಣಿಗೆ ಮಾಡಲಾಯಿತು. ವಿವಿಧ ಆಭರಣಗಳ ಸಮೇತ, ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಂದು, ಅಯ್ಯಪ್ಪನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.




