ನವದೆಹಲಿ: ಮಸೀದಿಯೊಳಗೆ ನುಗ್ಗಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಕ್ರಿಮಿನಲ್ ಅಪರಾಧ ಹೇಗೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಮಸೀದಿಯೊಳಗೆ ನುಗ್ಗಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಇಬ್ಬರು ವ್ಯಕ್ತಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ನಡೆಸಿದೆ.
ನಿರ್ದಿಷ್ಟ ಧಾರ್ಮಿಕ ಘೋಷಣೆ ಅಥವಾ ಹೆಸರನ್ನು ಕೂಗುವುದು ಹೇಗೆ ಅಪರಾಧ? ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದು ಹೇಗೆ? ಆರೋಪಿಗಳ ಗುರುತು ಖಾತ್ರಿಪಡಿಸಿಕೊಳ್ಳುವುದಕ್ಕೂ ಮುನ್ನ ಸಿಸಿಟಿವಿ ಇಲ್ಲವೇ ಇತರ ಯಾವುದೇ ಸಾಕ್ಷಿಗಳನ್ನು ಪರಿಶೀಲಿಸಲಾಗಿದೆಯೇ ಎಂದು ಕೋರ್ಟ್ ದೂರುದಾರ ಪರ ವಕೀಲರನ್ನು ಪ್ರಶ್ನಿಸಿದೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ.
ಈ ಪ್ರಕರಣದಲ್ಲಿ ಅಪರಾಧ ಕಂಡುಬರುತ್ತಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಆಗುತ್ತದೆ ಎಂದು ಹೇಳಿ, ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತ್ತು. ನಂತರ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.