ಕೊಪ್ಪಳ : ಬರೋಬ್ಬರಿ 17 ವರ್ಷಗಳ ಕಾಯುವಿಕೆ ನಂತರ ಕೊನೆಗೂ ಕೋಟ್ಯಾಂತರ ಅಭಿಮಾನಿಗಳ ಆಸೆ ಈಡೇರಿದೆ.
ಆರ್ಸಿಬಿ ಇಷ್ಟು ವರ್ಷಗಳ ಕಾಲ ಈ ಸಲ ಕಪ್ ನಮ್ದೇ ಎಂದು ಹೇಳುತ್ತಾ ಬಂದಿತ್ತು. ಆದರೆ ಈಗ ರಜತ್ ಪಾಟಿದಾರ್ ನಾಯಕತ್ವದಲ್ಲಿ ಈ ಸಲ ಕಪ್ ನಮ್ದು ಎನ್ನುವ ಮೂಲಕ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.ಇದೀಗ ಕೊಪ್ಪಳದಲ್ಲಿ ಆರ್ಸಿಬಿ ಅಭಿಮಾನಿಗಳು ಊರಿನವರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರದಲ್ಲಿ ಆರ್ಸಿಬಿ ಅಭಿಮಾನಿಗಳು ಕಪ್ ಗೆದ್ದ ಸಂತಸವನ್ನು ಊರಿನವರೊಂದಿಗೆ ಹಂಚಿಕೊಂಡಿದ್ದಾರೆ.
ಆರ್ಸಿಬಿ ಫ್ಯಾನ್ಸ್ ಆಗಿರುವ ಯುವಕರು ಇಡೀ ಊರಿಗೆ ಬಾಡೂಟ ಹಾಕಿಸಿದ್ದಾರೆ. ಇದೇ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಆರ್ಸಿಬಿ ಫೈನಲ್ನಲ್ಲಿ ಗೆಲುವು ಸಾಧಿಸಿದ್ದರಿಂದ ಯುವಕರ ಗುಂಪು ಬರೋಬ್ಬರಿ 2 ಕ್ವಿಂಟಲ್ ಚಿಕನ್ ಮತ್ತು 2 ಕ್ವಿಂಟಲ್ ಪಲಾವ್ ಮಾಡಿ ಇಡೀ ಗ್ರಾಮದ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಆರ್ಸಿಬಿ ಗೆದ್ದರೆ ಗ್ರಾಮಕ್ಕೆ ಬಾಡೂಟ ಹಾಕಿಸಬೇಕು ಎಂಬ ಆಲೋಚನೆ ಇದೀಗ ನನಸಾಗಿದೆ.
ಆದರೆ, ಕಪ್ ಗೆದ್ದ ಮರುದಿನವೇ ನಡೆದ ಭೀಕರ ಕಾಳ್ತುಳಿತದ ದುರಂತ ನಡೆದಿದ್ದರಿಂದ ಒಂದು ದಿನ ತಡವಾಗಿ ಊರಿಗೆ ಬಾಡೂಟ ಹಾಕಿಸಿದ್ದೇವೆ ಎಂದು ಯುವಕರು ಹೇಳಿದ್ದಾರೆ.




