—-ಅ.೨ರ ವರೆಗೆ ಸ್ವಚ್ಛತಾ ಹೀ ಸೇವಾ ಅಭಿಯಾನ || ಜಿಪಂ ಸಿಇಒ ಡಾ.ಗಿರೀಶ ಬದೋಲೆ ಹೇಳಿಕೆ
—————————————————————ಗ್ರಾಮಗಳನ್ನು ಕಸಮುಕ್ತ ಮಾಡುವ ಗುರಿ
ಭಾಲ್ಕಿ : ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅ.೨ರ ವರೆಗೆ ಸ್ವಚ್ಛತಾ ಹೀ ಸೇವಾ’ ಅಭಿಯಾನವನ್ನು ಆಯೋಜಿಸಲಾಗಿದೆ. ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಶ್ರಮದಿಂದ ಮಾತ್ರ ನಾವು ನಮ್ಮ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಹೇಳಿದರು.
ತಾಲೂಕಿನ ಮಳಚಾಪೂರ ಗ್ರಾಪಂ ವ್ಯಾಪ್ತಿಯ ಖಾನಾಪುರ ಗ್ರಾಮದ ಮೈಲಾರ ಮಲ್ಲಣ್ಣ ದೇಗುಲದ ಆವರಣದಲ್ಲಿ ಗುರುವಾರ ಸ್ವಚ್ಛತಾ ಹೀ ಸೇವಾ-೨೦೨೫ ಇದರಡಿ ಆಯೋಜಿಸಿದ್ದ ಶ್ರಮದಾನ-ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಗಳನ್ನು ಕಸಮುಕ್ತ ಮಾಡುವ ಗುರಿಯೊಂದಿಗೆ ಕಸ ಸಂಗ್ರಹಣೆ, ವಿಲೇವಾರಿ ಮತ್ತು ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದ್ದು, ಅಭಿಯಾನದ ಕಾಲಾವಧಿ ಪ್ರಕಾರ ತಮ್ಮ ತಮ್ಮ ಗ್ರಾಪಂಗಳಲ್ಲಿ ಸ್ವಚ್ಛತೆ ಕೈಗೊಂಡಿರುವ ಬಗ್ಗೆ ವಿವರಗಳನ್ನು ಸ್ವಚ್ಛತಾ ಸೇವಾ ಪೋರ್ಟಲ್‌ನಲ್ಲಿ ದಾಖಲಿಸಬೇಕು ಎಂದರು.
ದೇಗುಲದ ಪರಿಸರ, ಕಲ್ಯಾಣಿ, ದಾಸೋಹ ಸ್ಥಳ, ಪವಿತ್ರ ಸ್ನಾನ ಕುಂಡ, ದೇವಸ್ಥಾನದ ಮುಖ್ಯ ರಸ್ತೆ ಇತ್ಯಾದಿ ಸ್ಥಳಗಳಲ್ಲಿ ಶ್ರಮದಾನ ಕೈಗೊಳ್ಳಲಾಯಿತು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಮಳಚಾಪೂರ ಗ್ರಾಪಂ ಅಧ್ಯಕ್ಷೆ ಲಕ್ಷಿö್ಮಬಾಯಿ ಪಾಟೀಲ್, ಅಭಿವದ್ಧಿ ಅಧಿಕಾರಿ ಮುನೀರ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




