ಬಹುಭಾಷೆಗಳಲ್ಲಿ ಬ್ಯುಸಿಯಾಗಿರುವ ಕನ್ನಡ ನಟಿ ಶ್ರೀಲೀಲಾ ಅವರಿಗೆ ಇತ್ತೀಚೆಗೆ ಕಹಿ ಅನುಭವವಾಗಿದೆ. ಶೂಟಿಂಗ್ ಮುಗಿಸಿ ಹಿಂತಿರುಗುವಾಗ ಕೆಲವರು ಮಿತಿಮೀರಿದ ಉತ್ಸಾಹ ತೋರಿದ್ದಾರೆ. ಬಹುಬೇಡಿಕೆ ನಟಿಯ ತೋಳು ಹಿಡಿದು ಕೆಲವರು ಬಲವಂತವಾಗಿ ಎಳೆದಾಡಿದ್ದಾರೆ. ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ಶ್ರೀಲೀಲಾ ಪ್ರಸ್ತುತ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅನುರಾಗ್ ಬಸು ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ಚಿತ್ರ ಪ್ರಸ್ತುತ ಚಿತ್ರೀಕರಣದ ಹಂತದಲ್ಲಿದೆ.
ಶೂಟಿಂಗ್ ಡಾರ್ಜಿಲಿಂಗ್, ಸಿಕ್ಕಿಂ ಸೇರಿ ಹಲವು ಸುಂದರ ಸ್ಥಳಗಳಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಚಿತ್ರೀಕರಣ ಮುಗಿಸಿ ಕಾರ್ತಿಕ್ ಆರ್ಯನ್ ಜೊತೆ ಹಿಂತಿರುಗುತ್ತಿದ್ದಾಗ, ಸ್ಥಳೀಯರು ಮತ್ತು ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಕಾರ್ತಿಕ್ ಮುಂದೆ ನಡೆದರೆ, ಶ್ರೀಲೀಲಾ ನಗುತ್ತಾ ಹಿಂದೆ ಬರುತ್ತಿದ್ದರು. ಈ ವೇಳೆ ಶ್ರೀಲೀಲಾರನ್ನು ಎಳೆದಾಡಿರುವುದು ಕಂಡುಬಂದಿದೆ.
ನಟಿಗೆ ಬಾಡಿಗಾರ್ಡ್ಸ್ ರಕ್ಷಣೆ ನೀಡುತ್ತಿದ್ದರೂ, ಗುಂಪಿನಲ್ಲಿದ್ದ ಕೆಲವರು ಶ್ರೀಲೀಲಾ ಅವರ ತೋಳನ್ನು ಹಿಡಿದು ಬಲವಂತವಾಗಿ ಎಳೆದುಕೊಂಡು ಹೋದರು. ಘಟನೆಯಿಂದ ನಟಿ ಆಘಾತಕ್ಕೊಳಗಾದರು. ಕೂಡಲೇ ಅಂಗರಕ್ಷಕರು ಅವರನ್ನು ಬಿಡಿಸಲು ಮುಂದಾದರು. ನಟಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಮುಂದೆ ನಡೆಯುತ್ತಿದ್ದ ಕಾರ್ತಿಕ್ ಆರ್ಯನ್ ಅವರಿಗೆ ಈ ಘಟನೆ ಆ ತಕ್ಷಣಕ್ಕೆ ಗೊತ್ತಾಗಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶ್ರೀಲೀಲಾ ಅವರನ್ನು ನಡೆಸಿಕೊಂಡ ರೀತಿಗೆ ನೆಟ್ಟಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.