ತುರುವೇಕೆರೆ: ತಾಲ್ಲೂಕಿನ ವಿವಿಧ ಗ್ರಾಮಗಳ ಪುರಾತನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಂಬಂಧಪಟ್ಟ ದೇವಸ್ಥಾನದ ಸಮಿತಿಯವರಿಗೆ ಸಕಾಲದಲ್ಲಿ ತಲುಪದ ಕಾರಣ ದೇವಸ್ಥಾನದ ಅಭಿವೃದ್ದಿ ಕಾರ್ಯ ಕುಂಠಿತವಾಗಿದೆ ಎಂದು ಜೆಡಿಎಸ್ ಮುಖಂಡ, ಗ್ರಾಪಂ ಸದಸ್ಯ ಸಿದ್ದಗಂಗಯ್ಯ ಆರೋಪಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಸರ್ಕಾರದ ಮೇಲೆ ಒತ್ತಡ ಹಾಕಿ ಶ್ರಮವಹಿಸಿ ಗ್ರಾಮೀಣ ಪ್ರದೇಶದ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಶಾಸಕರ ಪ್ರದೇಶಾಭಿವೃದ್ದಿ ನಿಧಿ ಹಾಗೂ ಇನ್ನಿತರ ವಿವಿಧ ಯೋಜನೆಗಳಿಂದ ಅನುದಾನ ತಂದಿದ್ದು, ಅವುಗಳನ್ನು ಸಮರ್ಪಕ ರೀತಿಯಲ್ಲಿ ಆಯಾ ದೇವಾಲಯಗಳಿಗೆ ನಿಗದಿಯಾದ ಅನುದಾನವನ್ನು ದೇವಾಲಯದ ಜೀರ್ಣೋದ್ದಾರ ಸಮಿತಿಗೆ ನೀಡಬೇಕಾದದ್ದು ಇಲಾಖೆಯ ಕರ್ತವ್ಯವಾಗಿದೆ. ಆದರೆ ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ದಿ ಇಲಾಖೆಯ ಉಪವಿಭಾಗವು ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗ್ರಾಮದ ಮುಖಂಡರ ನೇತೃತ್ವದ ಜೀರ್ಣೋದ್ದಾರ ಸಮಿತಿಗೆ ಅನುದಾನ ಒದಗಿಸದೆ ದೇವಾಲಯದ ಅಭಿವೃದ್ದಿ ಕಾರ್ಯ ನಿಲ್ಲುವಂತೆ ಮಾಡಿದ್ದಾರೆ ಎಂದು ದೂರಿದರು.
ತಾಲ್ಲೂಕಿನ ಜನತೆ ತಮ್ಮ ಗ್ರಾಮದ ದೇವಾಲಯ ಅಭಿವೃದ್ದಿಗೆ ಅನುದಾನ ಬಂದಿರುವುದನ್ನು ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ದಿ ಇಲಾಖೆಯ ಉಪವಿಭಾಗದಿಂದ ಖಾತರಿಪಡಿಸಿಕೊಳ್ಳಲು ಇಲಾಖೆಯಿಂದ ಆದೇಶ ಪ್ರತಿ ಪಡೆಯಬೇಕೆಂದ ಅವರು, ಕೂಡಲೇ ಇಲಾಖೆಯು ದೇವಾಲಯದ ಅಭಿವೃದ್ದಿಗೆ ನೀಡಬೇಕಾದ ಅನುದಾನವನ್ನು ಸಂಬಂಧಪಟ್ಟ ದೇವಾಲಯ ಸಮಿತಿಗೆ ನೀಡಬೇಕು, ಇಲ್ಲವಾದಲ್ಲಿ ಇಲಾಖೆ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ವರದಿ: ಗಿರೀಶ್ ಕೆ ಭಟ್