ಬೆಳಗಾವಿ : ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಬೇಲೂರಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು, ಜೊತೆಗೆ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅಧಿವೇಶನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ‘ಸಾಲುಮರದ ತಿಮ್ಮಕ್ಕ ಅವರು ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ಥಾಪನೆ ಕುರಿತಂತೆ ಆಸೆ ವ್ಯಕ್ತಪಡಿಸಿದ್ದರು.
ಅದನ್ನು ಸಾಕಾರಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದರ ಜತೆಗೆ ಅರಣ್ಯ ಇಲಾಖೆ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಈ ಕುರಿತು ಶೀಘ್ರ ಆದೇಶಿಸಲಾಗುವುದು. ಅದೇ ರೀತಿ ದೇಶದ ಹೆಸರಾಂತ ಕಾದಂಬರಿಗಾರ ಡಾ.ಎಸ್.ಎಲ್.ಭೈರಪ್ಪ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು’ ಎಂದರು.




