ಬೆಂಗಳೂರು : ಮುಡಾ ಹಗರಣದಲ್ಲಿ ಇನ್ನು ಕೂಡ ಸಂಪೂರ್ಣವಾಗಿ ವಿಮುಕ್ತಿಯಾಗದ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಗಣಿ ಗುತ್ತಿಗೆ ನವೀಕರಣ ಹೆಸರಲ್ಲಿ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದ ಗಂಭೀರ ಆರೋಪ ಕೇಳಿ ಬಂದಿದೆ.
2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಿದ್ದರಾಮಯ್ಯ ಅವರು 8 ಗಣಿ ಗುತ್ತಿಗೆಯನ್ನು ಹರಾಜು ಹಾಕುವ ಬದಲಿಗೆ ನವೀಕರಣ ಮಾಡಿದ್ದರು.
ಅಲ್ಲದೇ ಸಾಕಷ್ಟು ವರ್ಷಗಳಿಂದ ಬಾಕಿ ಉಳಿದಿದ್ದ ಗಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪೆನಿಗಳ ಲೈಸೆನ್ಸ್ ಕೂಡ ನವೀಕರಣ ಮಾಡಲಾಗಿತ್ತು.
ಇದೀಗ ನವೀಕರಣ ಮಾಡಿಕೊಟ್ಟಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬರೋಬ್ಬರಿ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ರಾಮಮೂರ್ತಿ ಗೌಡ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಸರ್ಕಾರಕ್ಕೆ 5000 ಕೋಟಿ ನಷ್ಟ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 59, 61, 42, 201, 227, 228, 229, 239, 314, 316 (5) 318 (1), 319, 322, 324 (2), 324 (3), 335, 336, 338, 340 ರ ಪೂರ್ವಾನುಮತಿ ನೀಡುವಂತೆಯೂ ರಾಜ್ಯಪಾಲರ ಬಳಿ ಮನವಿ ಮಾಡಿದ್ದಾರೆ.
ಇನ್ನು ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಸಿಎಂ ಅವರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸಲು ಅನುಮತಿಯನ್ನು ನೀಡಬೇಕು, ಹಾಗೆಯೇ ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಯಬೇಕು ಎಂದು ರಾಜ್ಯಪಾಲರಿಗೆ ರಾಮಮೂರ್ತಿ ಗೌಡ ಮನವಿ ಮಾಡಿದ್ದಾರೆ.