ಮೈಸೂರು: ನನ್ನನ್ನು ಮುಟ್ಟಿದರೆ ನಮ್ಮ ಕರ್ನಾಟಕದ ಜನ ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಹೊರಲಹಳ್ಳ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನನ್ನು ಕಂಡರೆ ಬಿಜೆಪಿಯವರಿಗೆ ಹೊಟ್ಟೆ ಉರಿ.ಬಡವರ ಪರ ಕೆಲಸ ಮಾಡುತ್ತೇನೆ ಎಂದು ನನ್ನನ್ನು ಕೆಳಗೆ ಇಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಸಚಿವ, ಉಪ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ ಎಲ್ಲವೂ ಆಗಿದ್ದೇನೆ. 14 ನಿವೇಶನಕ್ಕಾಗಿ ನಾನು ರಾಜಕಾರಣ ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ನನ್ನ ವಿರುದ್ಧ ಕೇಸ್ ಹಾಕಿಸಿ ಸರ್ಕಾರ ಬಿಳಿಸಲು ಪ್ರಯತ್ನ ನಡೆಸಿದ್ದಾರೆ. ಜನರು ಮೂರ್ಖರು ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ.
ಜನರ ಬೆಂಬಲ ಇರುವವರೆಗೆ ಯಾವ ಕೇಸಿಗೆ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಬಿಜೆಪಿಯವರು ಚರ್ಚೆಗೆ ಬರಲಿ, ನಮ್ಮ ತಪ್ಪು ಏನೆಂಬುದನ್ನು ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.
ನೀವೆಲ್ಲರೂ ನನ್ನ ಜೊತೆ ನಿಲ್ಲಬೇಕು. ಜಾತಿ, ಧರ್ಮ ಬಿಟ್ಟು ಅಭಿವೃದ್ಧಿ ಮಾಡುವವರ ಜೊತೆಗೆ ನೀವು ಇರಬೇಕು. ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯಬೇಕೆಂದು 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್ ಕೊಟ್ಟಿದ್ದಾರೆ. ನಮ್ಮ ಶಾಸಕರು ಯಾವುದಕ್ಕೂ ಒಪ್ಪಲಿಲ್ಲ. ಹೀಗಾಗಿ ನನ್ನ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಈ ಹಿಂದೆ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದರು. ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದಿದ್ದ ಅವರು ಭ್ರಷ್ಟಾಚಾರ ಮಾಡಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.