ಬೆಂಗಳೂರು: ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದ ಮೇಲೆ ಬೇರೆಯವರು ಏನು ಹೇಳಲು ಸಾಧ್ಯ? ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಸರ್ಟಿಫಿಕೇಟ್ ಕೊಟ್ಟುಕೊಂಡ ಮೇಲೆ ನಾವೇನು ಸರ್ಟಿಫಿಕೇಟ್ ಅವರೇ ಕೊಟ್ಟಿದ್ದಾರಲ್ಲ. ಹೇಳ್ಳೋ ಅವಶ್ಯಕತೆ ಏನಿಲ್ಲ. ಸಚಿವ ಸ್ಥಾನವನ್ನು ನಾವು ಉಳಿಸಿಕೊಂಡ್ರೆ ಸಾಕು, ಅವರವರು ಉಳಿದ್ರೆ ಸಾಕು ಅಂತಿದ್ದಾರೆ. ಇನ್ನು ಬೇರೆಯವರದ್ದು ಎಲ್ಲಿ ಕೇಳುತ್ತಾರೆ ಎಂದರು.
ಸಿದ್ದರಾಮಯ್ಯ ಎಷ್ಟುದಿನ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ಹೇಳಿಕೆಗಳನ್ನು ಬಿಜೆಪಿ ಅವರು ನೀಡುತ್ತಿರುತ್ತಾರೆ. ಅವರು ಇವತ್ತೂಂದು ಹೇಳುತ್ತಾರೆ, ನಾಳೆ ಮತ್ತೂಂದು ಹೇಳುತ್ತಾರೆ. ಬಿಜೆಪಿ ನಾಯಕರು ಹೇಳುವ ಮಾತುಗಳನ್ನು ನಂಬುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಡಿ. ಕೆ. ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಭಾಗವಹಿಸಿದ್ದರ ಬಗ್ಗೆ ಮಾತಾಡುತ್ತಾ, ಅದರಲ್ಲಿ ಅಂಥ ವಿಶೇಷವೇನೂ ಇಲ್ಲ. ಕೆಪಿಸಿಸಿ ಅಧ್ಯಕ್ಷರು ಕರೆದಾಗ ಭಾಗವಹಿಸಲೇಬೇಕಾಗುತ್ತದೆ ಎಂದು ಹೇಳಿದರು.
ಸಚಿವರು ದೆಹಲಿಗೆ ಹೋದಾಗಲೆಲ್ಲ ಹೈಕಮಾಂಡ್ ಭೇಟಿ ಮಾಡುತ್ತಾರೆ. ಯಾರು ಹೋಗುತ್ತಾರೆ ಅವರಲ್ಲೇ ಹೈಕಮಾಂಡ್ ಕರೆದಿತ್ತಾ ನೀವು ಹೋದ್ರಾ ಎಂದು ಕೇಳಬೇಕು. ನಾವು ಹೋಗಿದ್ದಾಗ ಹೇಳಿದ್ದೆವು.
ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದೆವು. ಯಾವ ಅಲ್ಲೋಲ ಕಲ್ಲೋಲ ಆಗುವುದಿಲ್ಲ. ಅಲ್ಲೋಲ ಕಲ್ಲೋಲ ಯಾಕೆ ಆಗುತ್ತದೆ? ನಾವು 140 ಮಂದಿ ಇದ್ದೇವಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.