Ad imageAd image

ಗ್ಯಾರಂಟಿಗಳನ್ನು ಜಾರಿ ಮಾಡಿದ್ದಕ್ಕೆ ಹೊಟ್ಟೆಯುರಿಯಿಂದ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ : ಸಿದ್ದರಾಮಯ್ಯ

Bharath Vaibhav
ಗ್ಯಾರಂಟಿಗಳನ್ನು ಜಾರಿ ಮಾಡಿದ್ದಕ್ಕೆ ಹೊಟ್ಟೆಯುರಿಯಿಂದ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ : ಸಿದ್ದರಾಮಯ್ಯ
WhatsApp Group Join Now
Telegram Group Join Now

ಬೆಂಗಳೂರು  : ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧ, ಸಾಲ ಮನ್ನಾ ಇಂತಹ ಅನೇಕ ಪ್ರಗತಿಪರ ಕಾನೂನುಗಳನ್ನು ಮಾಡಿದ ದೇವರಾಜ ಅರಸು ಅವರು, ಅರಸು ಮನೆತನದಲ್ಲಿ ಹುಟ್ಟಿದರೂ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದರು.

ಅಂತೆಯೇ ಕಾಂಗ್ರೆಸ್ ಪಕ್ಷ ಅಸಮಾನತೆಯನ್ನು ಹೋಗಲಾಡಿಸಲು ಬಯಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಈಗಲೂ ಅಸಮಾನತೆ ವಿರುದ್ಧ ಹೋರಾಟ ಮಾಡುತ್ತಿದೆ. ಅದಕ್ಕೆ ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಅಸಮಾನತೆ ವಿರುದ್ಧ ಕಾರ್ಯಕ್ರಮ ನೀಡುತ್ತೇನೆಂಬ ಕಾರಣಕ್ಕೇ ಬಿಜೆಪಿ ನನ್ನನ್ನು ಸಹಿಸುತ್ತಿಲ್ಲ.

ಈಗ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಕ್ಕೆ ಹೊಟ್ಟೆಯುರಿಯಿಂದ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಯಾವುದಕ್ಕೂ ನಾನು ಹೆದರಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧನಾಗಿ ನಿಂತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದೇವರಾಜ ಅರಸು ಅವರು 1972 ರಿಂದ ದೀರ್ಘಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಹಾವನೂರ ಆಯೋಗ ರಚನೆ ಮಾಡಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಒದಗಿಸಿದರು.

ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ರಾಜಕೀಯವಾಗಿ ಗುರುತಿಸಿ, ಅವರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಕೊಟ್ಟರು. ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವೇ ಇಲ್ಲ ಎಂದುಕೊಂಡವರೂ ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು.

“ಅರಸು ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಜಾಫರ್ ಷರೀಫ್ ಅವರಿಗೆ ಟಿಕೆಟ್ ಕೊಟ್ಟರು. ನಾಗರತ್ನಮ್ಮ ಅವರು ಜಟಕಾ ಗಾಡಿ ಓಡಿಸುವವರಿಗೆ ಟಿಕೆಟ್ ಕೊಡ್ತೀಯಲ್ಲ ಎಂದು ಕೇಳಿದರು.

ನೋಡಮ್ಮಾ, ಇನ್ನು ಮೇಲೆ ಜಟಕಾ ಸಾಹೇಬರಿಗೆ, ಕ್ಷೌರ ಮಾಡುವವರಿಗೆ ಟಿಕೆಟ್ ಕೊಡೋದು, ಶೋಕಿ ಮಾಡುವವರಿಗಲ್ಲ ಎಂದು ಅರಸುರವರು ಉತ್ತರಿಸಿದ್ದರಂತೆ”.

ಭಾರತೀಯ ಜನತಾ ಪಕ್ಷದವರು ತಾವು ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರ ಪರ ಎಂದು ಎಷ್ಟೇ ಹೇಳಿಕೊಂಡರೂ, ಅವರು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ಇರಲು ಸಾಧ್ಯವೇ ಇಲ್ಲ. ಬಡವರು ಯಥಾಸ್ಥಿತಿಯಲ್ಲಿರಬೇಕು, ಅವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬರಬಾರದು ಎಂದು ಬಯಸುತ್ತಾರೆ.

ಬಾಯಿ ಮಾತೇ ಬೇರೆ, ಕೃತಿಯೇ ಬೇರೆ. ಇಂದು ದೇಶದ ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಗೆ ರಾಜೀವ್ ಗಾಂಧಿಯವರು ಕಾರಣ. ರಾಜೀವ್ ಗಾಂಧಿಯವರು ಯುವ ಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು.

ಆದ್ದರಿಂದ ಮತದಾನದ ವಯಸ್ಸು 21 ರಿಂದ 18 ಕ್ಕೆ ಇಳಿಸಿದರು. ಅವರು ಇನ್ನೂ ಬದುಕಿರಬೇಕಾಗಿತ್ತು. ಅವರು ಇದ್ದಿದ್ದರೆ ದೇಶದಲ್ಲಿ ನಿಜವಾದ ಬದಲಾವಣೆ ಆಗಿರುತ್ತಿತ್ತು. ದೇಶ, ಸಮಾಜದ ಬಗ್ಗೆ ಕಾಳಜಿ ಇದ್ದವರು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!