ಬೆಂಗಳೂರು : ಕೇಂದ್ರ ಸರ್ಕಾರವು ನಿರ್ಧರಿಸಿರುವ ಮುಂದಿನ ದಶಕದ ಜನಗಣತಿಯೊಂದಿಗೆ ಜಾತಿ ಗಣತಿ ಮಾತ್ರವಲ್ಲ ಸಾಮಾಜಿಕ, ಶೈಕ್ಷಣಿ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಮಾಡಬೇಕು. ಜಾತಿಗಣತಿ ಆಗಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದರು.
ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಿದಾಗ ಮಾತ್ರ ಯಾವ್ಯಾವ ಜಾತಿಯವರು ಯಾವ ಸ್ಥಾನದಲ್ಲಿದ್ದಾರೆ, ಅವರಲ್ಲಿ ಎಷ್ಟು ಜನ ವಿದ್ಯಾವಂತರಾಗಿದ್ದಾರೆ.
ಎಷ್ಟು ಜನ ಉದ್ಯೋಗದಲ್ಲಿದ್ದಾರೆ ಎಲ್ಲವೂ ತಿಳಿಯಲಿದೆ. ಆದ್ದರಿಂದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಗತ್ಯ. ಅದರೊಂದಿಗೆ ಜಾತಿ ಜನಗಣತಿ ಬಳಿಕ ಅದರ ಅನುಗುಣವಾಗಿ ಮೀಸಲಾತಿಯನ್ನೂ ಸಹ ಹೆಚ್ಚಿಸಬೇಕು ಎಂದು ಪ್ರತಿಪಾದಿಸಿದರು.
ಇನ್ನು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಬೇಕು. ಕೇಂದ್ರ ಸುಮ್ಮನೇ ಘೋಷಣೆ ಮಾಡಬಾರದು. ಬಿಜೆಪಿಯವರ ಇತಿಹಾಸ ನೋಡಿದರೆ ಸಾಮಾಜಿಕ, ನ್ಯಾಯಪರ ಇಲ್ಲ. ಹೀಗಾಗಿ ಕೂಡಲೇ ಯಾವ ದಿನಾಂಕದಿಂದ ಜನಗಣತಿ ಮತ್ತು ಜಾತಿಗಣತಿ ಆರಂಭಿಸುತ್ತಾರೆ ಎಂದು ತಿಳಿಸಲಿ. ಅದರೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯೂ ಆಗಬೇಕು ಎಂದು ಒತ್ತಿ ಹೇಳಿದರು.
192 ಕೋಟಿ ರೂಪಾಯಿ ವೆಚ್ಚದಲ್ಲಿ 2015ರಲ್ಲೇ ನಾನು ಸಿಎಂ ಆಗಿದ್ದಾಗ ಜಾತಿಗಣತಿ ಬಗ್ಗೆ ನಿರ್ಧರಿಸಿದ್ದೆ. ಅದಾದ ಮೇಲೆ ನಾನು ಸಿಎಂ ಆಗಿ ಇರಲಿಲ್ಲ. ಹೀಗಾಗಿ ಆ ವರದಿ ಸ್ವೀಕೃತವಾಗಲಿಲ್ಲ. ಒತ್ತಾಯ ಮಾಡಿದರೂ ಬಿಜೆಪಿಯವರು ವರದಿಯನ್ನು ಪರಿಗಣಿಸಲಿಲ್ಲ.
ತರಾತುರಿಯಲ್ಲಿ ಬಿಹಾರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗ ಕೇಂದ್ರ ಸರ್ಕಾರ ಜನಗಣತಿ, ಜಾತಿಗಣತಿ ವಿಚಾರವನ್ನು ಘೋಷಣೆ ಮಾಡಿದಂತಿದೆ. ಕೇಂದ್ರದ ಮೇಲೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಡ ಹಾಕಿದ್ದಕ್ಕೆ ಕೇಂದ್ರ ಈ ತೀರ್ಮಾನಕ್ಕೆ ಬಂದಿದೆ ಎಂದು ಸಿಎಂ ಇದೇ ವೇಳೆ ಅವರನ್ನು ಅಭಿನಂದಿಸಿದರು.
ಜಾತಿಗಣತಿಯ ಕುರಿತಾಗಿ ಈಗಾಗಲೇ ಸಚಿವರಿಗೆ ಅಭಿಪ್ರಾಯಗಳನ್ನು ತಿಳಿಸಲು ಸೂಚಿಸಲಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಬಿಹಾರದಲ್ಲಿ ಜಾತಿಗಣತಿ ಮಾಡಿದ್ದಾರೆ. ಅಲ್ಲಿ ಅಧಿಕಾರದಲ್ಲಿ ಎನ್ಡಿಎ ಮಿತ್ರಪಕ್ಷವಿದೆ. ರಾಜ್ಯಗಳು ಜಾತಿಗಣತಿ ಮಾಡಕೂಡದು ಎಂದು ಸಂವಿಧಾನದಲ್ಲಿ ಇಲ್ಲ. ನಾವು ಮಾಡಿದರೆ ಮಾನ್ಯತೆ ಇಲ್ಲ ಎನ್ನುವ ಬಿಜೆಪಿಯವರ ಟೀಕೆಗೆ ಸಿಎಂ ಟಾಂಗ್ ನೀಡಿದರು.