ಮೈಸೂರು: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿ ಅವಧಿಯ ಸುದೀರ್ಘ ಅವಧಿಯ ದಾಖಲೆ ಮುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುರಿಯಲಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ.
ಕರಸುರವರು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿ. ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 8ಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿದ್ದೇನೆ ಎಂದರು.
ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಚುನಾವಣೆಯನ್ನು ಸರ್ವಾನುಮತದಿಂದಲೂ ಆಯ್ಕೆಯಾಗಿದ್ದರು.
ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು. ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದರು.
ಬಜೆಟ್ ತಯಾರಿಯನ್ನು ಸಂಕ್ರಾಂತಿಯ ನಂತರ ಪ್ರಾರಂಭಿಸಲಾಗುವುದು.ಸಂಪುಟ ಪುನರ್ರಚನೆಯ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಲಾಗುವುದು. ಅವರು ಸಮಯ ನೀಡಿದರೆ ಚರ್ಚಿಸಲಿರುವುದಾಗಿ ತಿಳಿಸಿದರು.
ಇನ್ನು ಬಳ್ಳಾರಿಯಲ್ಲಿ ನಡೆದ ಸಂರ್ಘಷದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿರುವ ಘಟನೆಯ ತನಿಖೆಯನ್ನು ಸಿಐಡಿ ವಹಿಸುವ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ. ಪೊಲೀಸ್ ತನಿಖೆಯ ನಂತರ ಘಟನೆಯ ಸತ್ಯಾಸತ್ಯತೆ ತಿಳಿಯಲಿದೆ ಎಂದರು.




