ಬೆಂಗಳೂರು : ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ ನಡೆಸಿದರು.
ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ 11೦ ಎಕರೆ ಕೆಐಎಡಿಬಿ ಭೂಮಿಯನ್ನು ಶೀಘ್ರವೇ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಲು ಕ್ರಮ ವಹಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದರು.
ಸ್ವಾಧೀನಪಡಿಸಿಕೊಂಡ ಬಳಿಕ ಆದಷ್ಟು ಬೇಗನೆ ಟೆಂಡರ್ ಕರೆದು ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕ ಮಾಡಲು ಟೆಂಡರ್ ಕರೆಯಬೇಕು. ಇದಲ್ಲದೇ ಹೆಚ್ಚುವರಿಯಾಗಿ 2ನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಆದೇಶಿಸಿದರು.
3 ವರ್ಷಗಳ ಒಳಗಾಗಿ ಚಿತ್ರನಗರಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಚಿತ್ರರಂಗದವರ ಅಭಿಪ್ರಾಯಗಳನ್ನು ಸಹ ಪಡೆದುಕೊಂಡು, ಎಲ್ಲಾ ಸೌಲಭ್ಯಗಳು ಒಳಗೊಂಡಿರುವ ಚಿತ್ರನಗರಿ ನಿರ್ಮಾಣವಾಗಬೇಕು. ಇದಕ್ಕಾಗಿ ದೇಶದ ಪ್ರಮುಖ 3 ಚಿತ್ರನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಎಂದು ಸಿಎಂ ಸಲಹೆ ನೀಡಿದರು.