ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಮಾರ್ಚ್ 3ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ.
ಮೊದಲ ದಿನ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.
ಇಂದು ಸಿಎಂ 2025 -26 ನೇ ಸಾಲಿನ ಬಜೆಟ್ ಮಂಡನೆ ಮಂಡಿಸಲಿದ್ದಾರೆ.ಸಿಎಂ ಸಿದ್ಧರಾಮಯ್ಯ ರಾಜ್ಯದ ಮಟ್ಟಿಗೆ ಅತ್ಯಧಿಕ 16ನೇ ಬಜೆಟ್ ಮಂಡಿಸುವ ದಾಖಲೆ ಬರೆಯಲಿದ್ದಾರೆ. ಮುಖ್ಯಮಂತ್ರಿಯಾಗಿ ಇದು 9ನೇ ಬಜೆಟ್ ಆಗಿದೆ.
ಈ ಹಿಂದೆ ರಾಮಕೃಷ್ಣ ಹೆಗಡೆ 13 ಬಾರಿ ಬಜೆಟ್ ಮಂಡಿಸಿದ್ದು ದಾಖಲೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಾರಿಗೆ ಬಜೆಟ್ ಮಂಡಿಸಲಿದ್ದು, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮುಂದುವರೆಸಲಿದ್ದಾರೆ.
ಇತ್ತ ಒಂದೆಡೆ ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ ಎಂಬ ಅಸಮಾಧಾನ ಹಲವು ಶಾಸಕರಲ್ಲಿದ್ದು, ಬಹಿರಂಗ ಅಸಮಾಧಾನ ಕೂಡ ಹೊರಹಾಕಿದ್ದಾರೆ. ಈ ಎಲ್ಲವನ್ನೂ ಸಿಎಂ ಸಿದ್ದು ನಿಭಾಯಿಸಬೇಕಿದೆ.
ಇನ್ನು ಗ್ಯಾರೆಂಟಿಗಳನ್ನು ಹೊರತುಪಡಿಸಿ ರಾಜ್ಯದ ಜನರ ನಿರೀಕ್ಷೆಗಳನ್ನು ತಲುಪಬೇಕಿದ್ದು, ನೀರಾವರಿ ಯೋಜನೆಗಳ ಪೈಕಿ ಮೇಕೆದಾಟು, ಮಹದಾಯಿ ಯೋಜನೆಗಳ ಪ್ರಸ್ತಾಪ ಮಾಡಿದ್ದು ಈ ಬಗ್ಗೆ ನಿರೀಕ್ಷೆಯಿದೆ.
ಇನ್ನು ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗದಿರುವ ಬಗ್ಗೆ ಕೇಂದ್ರದ ನಿರ್ಲಕ್ಷ್ಯವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ಜೊತೆಗೆ ಮೇಕೆದಾಟು ಯೋಜನೆಯ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.




