Ad imageAd image

ರೈತರ ವಿಷಯದಲ್ಲಿ ಸರ್ಕಾರ ಯಾವುದೇ ಆತ್ಮವಂಚನೆ ಮಾಡುವುದಿಲ್ಲ : ಸಿದ್ದರಾಮಯ್ಯ 

Bharath Vaibhav
ರೈತರ ವಿಷಯದಲ್ಲಿ ಸರ್ಕಾರ ಯಾವುದೇ ಆತ್ಮವಂಚನೆ ಮಾಡುವುದಿಲ್ಲ : ಸಿದ್ದರಾಮಯ್ಯ 
WhatsApp Group Join Now
Telegram Group Join Now

ಬೆಳಗಾವಿ: ಇಂದು ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ಸಭೆ ನಡೆಸಿದ್ದಾರೆ.

ಈ ವೇಳೆ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಸಿಎಂ ಅವರನ್ನು ಸನ್ಮಾನಿಸಿ, ಧನ್ಯವಾದ ಸಲ್ಲಿಸಿದರು.

ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕಬ್ಬು ಬೆಳೆಗಾರರು ಸೇರಿದಂತೆ ಎಲ್ಲಾ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ರೈತರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಬಂದ ಬಳಿಕ ಪ್ರತಿ ಲೀಟರ್ ಹಾಲಿಗೆ ರೂ.5 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಖರೀದಿಗೆ ರೂ.5 ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡುತ್ತಿದ್ದೇವೆ.

ಕಬ್ಬಿನ ತೂಕದಲ್ಲಿ ಸಕ್ಕರೆ ಕಾರ್ಖಾನೆಗಳು ಮಾಡುವ ಮೋಸವನ್ನು ತಪ್ಪಿಸಲು, ಇಳುವರಿ ನಿಗದಿಯನ್ನು ವೈಜ್ಞಾನಿಕವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಭೂ ಸುಧಾರಣಾ ಕಾಯ್ದೆಗೆ ಹಿಂದಿನ ಸರ್ಕಾರ ಮಾಡಿರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನೀರಾವರಿಗೆ ವಿದ್ಯುತ್‌ ಸಮಸ್ಯೆಯಿದ್ದು, 12 ತಾಸು ನಿರಂತರ ವಿದ್ಯುತ್‌ ಪೂರೈಕೆ ಮಾಡಬೇಕು, ಅಕ್ರಮ – ಸಕ್ರಮ ಯೋಜನೆಯನ್ನು ಪುನಾರಂಭಿಸಬೇಕು, ಕಾಡುಪ್ರಾಣಿಗಳಿಂದ ಬೆಳೆ ಹಾನಿ ಪರಿಹಾರ ಧನ ಹೆಚ್ಚಿಸಬೇಕು. ರೈತರ ಉತ್ಪನ್ನಗಳ ಖರೀದಿಗೆ ಕಾರ್ಪಸ್‌ ಫಂಡ್‌ ಆರಂಭಿಸಬೇಕು.

ಪಂಚಾಯತ್‌ ಮಟ್ಟದಲ್ಲಿ ಪಶು ವೈದ್ಯರ ನೇಮಕ ಮಾಡಬೇಕು. ಬೆಳಗಾವಿಯಲ್ಲಿ ಆರಂಭಿಸಲಾಗಿರುವ ಸಕ್ಕರೆ ಆಯುಕ್ತರ ಕಚೇರಿಗೆ ಅಗತ್ಯ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ರೈತ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು ಎಂದರು.

ರೈತರಿಗೆ 7 ಗಂಟೆ ಕಾಲ ನಿರಂತರ ವಿದ್ಯುತ್‌ ಒದಗಿಸಲು ಸರ್ಕಾರ ಬದ್ಧವಾಗಿದೆ. ವಿದ್ಯುತ್‌ ಉತ್ಪಾದನೆ ಹೆಚ್ಚಾದಾಗ ವಿದ್ಯುತ್‌ ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.

ರೈತರ ವಿಷಯದಲ್ಲಿ ಸರ್ಕಾರ ಯಾವುದೇ ಆತ್ಮವಂಚನೆ ಮಾಡುವುದಿಲ್ಲ. ನಮ್ಮ ಸರ್ಕಾರ ರೈತ ಪರವಿದ್ದು, ಅನ್ನದಾತರ ಎಲ್ಲಾ ಸಮಸ್ಯೆಗಳಿಗೂ ನ್ಯಾಯಯುತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು  ಸಿಎಂ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!