ತುಮಕೂರು : ಪತ್ರಕರ್ತರ ಆರೋಗ್ಯ ವಿಮೆಗೆ ಬೇಡಿಕೆ ಇದ್ದು ಈಗಾಗಲೇ ರೂ.10 ಕೋಟಿ ಮೀಸಲಿಡಲಾಗಿದೆ, ಸದ್ಯದಲ್ಲೇ ಜಾರಿಗೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಶೀಘರ್ವೇ ನಿಮ್ಮ ಕೈ ಸೇರಲಿದೆ, ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನಿಸಲಾಗುವುದು.ಪತ್ರಕರ್ತರ ಮಾಸಾಶನವನ್ನೂ ರೂ.3 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.
ಅನ್ಯಾಯದಿಂದ ನರಳುತ್ತಿರುವವರ ಧ್ವನಿಯಾಗಿ ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು.
ರಾಜಕಾರಣಿಗಳು, ಸಾಹಿತಿಗಳು, ಪತ್ರಕರ್ತರು ಆತ್ಮಾವಲೋಕನ ಮಾಡಿಕೊಂಡು ಅನ್ಯಾಯಕ್ಕೊಳಗಾದವರ ಪರ ನಿಲ್ಲಬೇಕು. ಇನ್ನು ಮೌಢ್ಯ, ಕಂದಾಚಾರಗಳಿಗೆ ಮಾಧ್ಯಮದವರು ದಯಮಾಡಿ ಆದ್ಯತೆ ನೀಡಬೇಡಿ ಎಂದು ಸಿಎಂ ಸಲಹೆ ನೀಡಿದರು.
ನಾನು ಚಾಮರಾನಗರಕ್ಕೆ ಸುಮಾರು 15 ಬಾರಿ ಹೋಗಿದ್ದೇನೆ. ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತೆ ಅಂತಾ ಕೆಲವರು ಬರೆದಿದ್ದರು. ಆದರೆ ನನ್ನ ಕುರ್ಚಿ ಗಟ್ಟಿಯಾಗಿದೆ. ಇಂತಹ ಸುದ್ದಿಗಳಿಗೆ ಒತ್ತು ಕೊಡಬೇಡಿ. ಯಾವುದೇ ವರದಿ ಮಾಡಿ, ನಿಮ್ಮ ಸುದ್ದಿ ಸತ್ಯದಿಂದ ಕೂಡಿರಬೇಕು. ಬರೆಯುವ ಮುನ್ನ ಯೋಚಿಸಿ ಬರೆಯಬೇಕು. ಧಾವಂತ ಮಾಡಬೇಡಿ ಎಂದು ಸಿಎಂ ಕಿವಿ ಮಾತು ಹೇಳಿದರು.




