ಬೆಂಗಳೂರು : ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳ ಪ್ರಕರಣಗಳು ವರದಿ ಬೆನ್ನಲ್ಲೇ ರಾಜ್ಯದಲ್ಲಿ ಸಹಾಯವಾಣಿ ಕೇಂದ್ರ ಹಾಗೂ ಫೈನಾನ್ಸ್ ಕಂಪನಿಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಇಂದು ಸಿಎಂ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಕ್ರೋ ಫೈನಾನ್ಸ್ ಹಾಗೂ ಸಂಬಂಧಪಟ್ಟವರೊಂದಿಗೆ ಸಭೆ ಮಾಡಿದ್ದೇನೆ. ಕಾನೂನು ಉಲ್ಲಂಘಿಸಿದರೆ, ಮಿತಿ ಮೀರಿ ಬಡ್ಡಿ ವಸೂಲಿ ಮಾಡಿದರೆ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳುವುದಾಗಿ ಮೈಕ್ರೋ ಫೈನಾನ್ಸ್ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕಿರುಕುಳ ತಪ್ಪಿಸಲು ಕಾನೂನು, ಗೃಹ ಇಲಾಖೆ ಸೇರಿ ಶೀಘ್ರವೇ ಹೊಸ ಕಾನೂನು ರಚನೆ ಮಾಡೇ ಮಾಡುತ್ತೇವೆ. ಕೇಂದ್ರ ಸರ್ಕಾರವೂ ಕಾನೂನು ರಚಿಸಬೇಕಾಗಿದೆ. ಸಾಲ ವಸೂಲಾತಿಗೆ ಜನರನ್ನು ಬೆದರಿಸಬಾರದು. ಆರ್ಬಿಐ ನಿಯಮ ಪಾಲಿಸಬೇಕು.
ಸಂಜೆ ಐದು ಗಂಟೆ ನಂತರ ಸಾಲ ವಸೂಲಿಗೆ ಹೋಗಬಾರದು. ಅದಕ್ಕಾಗಿ ರೌಡಿ, ಗೂಂಡಾಗಳನ್ನು ಬಳಸಿಕೊಳ್ಳಬಾರದು. ಕಾನೂನು ಮೀರಿ ಸೇರಿ ಹೆಚ್ಚಿನ ಬಡ್ಡಿ ವಿಧಿಸಬಾರದು. ಲೈಸನ್ಸ್ ಇಲ್ಲದೇ ಫೈನಾನ್ಸ್ ಮಾಡಬಾರದು. ನಿಯಮ ಮೀರಿದರೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸಿಎಂ ಎಚ್ಚರಿಕೆ ನೀಡಿದರು.