Ad imageAd image

ರಾಜ್ಯದ ಎಲ್ಲಾ ಹಿಂದುಳಿದ ಜಾತಿ ಸಂಘಗಳಿಗೆ 2.5 ಎಕರೆ ಜಮೀನು : ಸಿದ್ದರಾಮಯ್ಯ ಘೋಷಣೆ

Bharath Vaibhav
ರಾಜ್ಯದ ಎಲ್ಲಾ ಹಿಂದುಳಿದ ಜಾತಿ ಸಂಘಗಳಿಗೆ 2.5 ಎಕರೆ ಜಮೀನು : ಸಿದ್ದರಾಮಯ್ಯ ಘೋಷಣೆ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಎಲ್ಲಾ ಹಿಂದುಳಿದ ಜಾತಿ ಸಂಘಗಳಿಗೂ ಸರ್ಕಾರದಿಂದ ಉಚಿತವಾಗಿ ಜಮೀನು ನೀಡಲು ಚಿಂತನೆ ನಡೆಸಲಾಗಿದೆ. ಕನಿಷ್ಠ 2.5 ಎಕರೆ ಜಮೀನು ನೀಡುವ ಬಗ್ಗೆ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದೇವಾಂಗ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ಜಾತಿ ಸಂಘಟನೆಗಳಿಗೆ ತಲಾ ಕನಿಷ್ಠ ಎರಡಿಂದ ಎರಡೂವರೆ ಎಕರೆ ಜಮೀನು ನೀಡಲು ಅವಕಾಶವಿದೆ. ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ದೇವಾಂಗ ಸಮಾಜ ಸಂಘಟನೆ ಸೇರಿ ಎಲ್ಲಾ ಹಿಂದುಳಿದ ಜಾತಿ ಸಂಘಟನೆಗಳಿಗೆ ಸರ್ಕಾರದಿಂದ ಉಚಿತವಾಗಿ ಜಮೀನು ನೀಡಲಾಗುವುದು. ದೇವಾಂಗ ಸಮುದಾಯದ ಬೇಡಿಕೆಯಂತೆ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೇವಾಂಗ ಸಮುದಾಯದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘವು ನೂರು ವರ್ಷಗಳನ್ನು ಪೂರೈಸುವುದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಸಂಘವು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯ ವ್ಯವಸ್ಥೆ ಒದಗಿಸಲಾಗುತ್ತಿರುವುದು ಸಂತಸದ ವಿಚಾರ ಎಂದರು.

ಮಹಿಳೆಯರು ಹಾಗೂ ಶೋಷಿತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಪ್ರಸ್ತುತ ಲಿಂಗ ತಾರತಮ್ಯ ನೀಗುತ್ತಿದ್ದು, ದೇವಾಂಗ ಸಂಘವು ಮಹಿಳಾ ಸಬಲೀಕರಣಕ್ಕೆ ನೆರವು ನೀಡುತ್ತಿದೆ. ಮಹಿಳಾ ವಸತಿನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಮಾಡುತ್ತೇವೆ ಎಂದರು.

ಎಲ್ಲರನ್ನೊಳಗೊಂಡ ಅಭಿವೃದ್ಧಿಯನ್ನು ಸಾಧಿಸುವುದು ನಮ್ಮ ಸರ್ಕಾರದ ಧ್ಯೇಯ. ಶ್ರೀಮಂತ ಇತಿಹಾಸವಿರುವ ಈ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ರೈತರು ಆಹಾರ ಪೂರೈಸಿದಂತೆ, ನೇಕಾರರು ಬಟ್ಟೆಯನ್ನು ತಯಾರಿಸುತ್ತಾರೆ.

ಈ ಸಮುದಾಯದ ಸಂಘಟನೆಯಾಗುವುದು ಅಗತ್ಯ. ಸಂಘಟನೆಯ ಮೂಲಕವೇ ಶಕ್ತಿ ಬೆಳೆಯುತ್ತದೆ. ಹಿಂದುಳಿದವರು ಸಂಘಟಿಸಿದರೆ ಜಾತಿಯತೆಯಾಗುವುದಿಲ್ಲ ಎಂದು ಚಿಂತಕರಾದ ಲೋಹಿಯಾ ಅವರು ಹೇಳಿದ್ದಾರೆ ಎಂದರು.

ದೇವಾಂಗ ಸಮುದಾಯದಲ್ಲಿರುವ ಎಲ್ಲ ಉಪಜಾತಿಗಳನ್ನು ತೆಗೆಯಬೇಕು. ಸಮುದಾಯದಲ್ಲಿ ಹಲವು ಗುಂಪುಗಳಿದ್ದರೂ, ಒಂದೇ ಶಕ್ತಿಯಾಗಿ ಸಂಘಟಿತರಾಗಬೇಕು. ಸಮಾಜದಲ್ಲಿ ಸಾಕ್ಷರತೆ ಶೇ.76 ರಷ್ಟಿದ್ದು, ಮಹಿಳೆಯರಲ್ಲಿ ಈ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. ಸಮುದಾಯದ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು.

ಜಾತಿವ್ಯವಸ್ಥೆಯಿಲ್ಲದ ಸಮಾಜವನ್ನು ನಿರ್ಮಿಸುವುದೇ ಸಂವಿಧಾನದ ಆಶಯವಾಗಿದೆ. ಎಲ್ಲ ಜಾತಿ – ಧರ್ಮದವರು ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕು. ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ನಿಮ್ಮ ಹಕ್ಕುಗಳನ್ನು ಪಡೆಯಬೇಕಿದೆ ಎಂದರು.

2004-05 ರಲ್ಲಿ ಹಣಕಾಸು ಸಚಿವನಾಗಿದ್ದ ಸಂದರ್ಭದಲ್ಲಿ ನೇಕಾರರಿಗೆ ತಲಾ ಯೂನಿಟ್ ಗೆ 4.20 ರೂ. ಇದ್ದ ವಿದ್ಯುತ್ ದರವನ್ನು 1.20 ರೂ.ಗಳಿಗೆ ಕಡಿತಗೊಳಿಸಿದ್ದೆ. ಈ ಯೋಜನೆಯಿಂದ ಸಮುದಾಯದ ಶೇ.80 ರಷ್ಟು ಜನರಿಗೆ ಅನುಕೂಲವಾಗಿತ್ತು.

ಪ್ರಸ್ತುತ ನೇಕಾರರಿಗೆ 20 ಹೆಚ್.ಪಿ ವರೆಗೆ ರಿಯಾಯತಿ ದರದಲ್ಲಿ ವಿದ್ಯುತ್ ವ್ಯವಸ್ಥೆ ನೀಡಲಾಗುತ್ತಿದೆ. ಶೂನ್ಯಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗೆ ಸಾಲ ವ್ಯವಸ್ಥೆ, ನೇಕಾರ ಸಮ್ಮಾನ ಯೋಜನೆ ಇದೆ. ಇದರ ಲಾಭ ಪಡೆಯಬೇಕು ಎಂದರು.

ದೇವರದಾಸಿಮಯ್ಯ ಅವರ ಜಯಂತಿಯನ್ನು ಪ್ರಾರಂಭಿಸಿದ್ದು ನಮ್ಮ ಸರ್ಕಾರ. ಸಮುದಾಯದ ಜನಪ್ರತಿನಿಧಿಗಳು ಹಲವರು ಶಾಸಕರು ಮತ್ತು ಎಂಎಲ್ ಸಿ ಗಳಾಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಜಮೀನು ನೀಡುವ ಚಿಂತನೆಯನ್ನು ಸರ್ಕಾರ ಹೊಂದಿದೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆಯಿದ್ದು, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!