ಬೆಂಗಳೂರು: ಎಲ್‌ಪಿಜಿ ಅಭಾವವನ್ನು ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲದಲ್ಲಿ ಸರ್ಕಾರದ ವತಿಯಿಂದ ಈ ಬಗ್ಗೆ ಈಗಾಗಲೇ ಉತ್ತರ ನೀಡಲಾಗಿದೆ ಎಂದರು.
ಆಹಾರಕ್ಕಾಗಿ ಹೋಟೆಲ್ ಗಳ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿಯವರು ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಿಸುವ ಭರವಸೆ ನೀಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಮಾತ್ರ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿರುವುದಲ್ಲ, ದೇಶದ ಎಲ್ಲ ಕಡೆಯೂ ಇದೇ ಪರಿಸ್ಥಿತಿ ಇದೆ. ರಾಜ್ಯ ಬಿಜೆಪಿಯವರು ಅರ್ಥವಿಲ್ಲದಂತೆ ಮಾತನಾಡುವ ಬದಲು, ಎಲ್‌ಪಿಜಿ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲು ಕೇಂದ್ರವನ್ನು ಒತ್ತಾಯಿಸಲಿ ಎಂದು ಹೇಳಿದ್ದಾರೆ.




