ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ, ಸದ್ಯ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿರುವ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಸರಣಿ ಸಿನಿಮಾಗಳಿವೆ. ಬಹುನಿರೀಕ್ಷಿತ ‘ಸಿಕಂದರ್’ ಭಾನುವಾರ ತೆರೆಗಪ್ಪಳಿಸಲಿದ್ದು, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ, ಸೋಷಿಯಲ್ ಮೀಡಿಯಾ ಮೂಲಕ ಅವರೊಂದಿಗೆ ಸಂವಹನ ನಡೆಸಿದ್ದಾರೆ. ಫ್ಯಾನ್ಸ್ ಪ್ರಶ್ನೆಗಳಿಗೆ ಫನ್ ಉತ್ತರಗಳನ್ನು ನೀಡೋ ಮೂಲಕ ಗಮನ ಸೆಳೆದಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ: ‘ಕಿರಿಕ್ ಪಾರ್ಟಿ’ ಬೆಡಗಿ ತಮ್ಮ ಕಾಲಿನ ಗಾಯದ ಬಗ್ಗೆಯೂ ಮಾತನಾಡಿದರು. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು. “ಕಾಲು ಈಗಷ್ಟೇ ಗುಣವಾಗುತ್ತಿದೆ. ಆದ್ರೆ ಸಂಪೂರ್ಣವಾಗಿ ಸರಿಯಾಗಲು ಇನ್ನೂ 9 ತಿಂಗಳುಗಳು ಬೇಕಾಗುತ್ತದೆ. ಪರಿಸ್ಥಿತಿ ಸುಧಾರಿಸಿದೆ. ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ” ಎಂದು ರಶ್ಮಿಕಾ ಅಭಿಮಾನಿಯೊಬ್ಬರಿಗೆ ಉತ್ತರಿಸಿದ್ದಾರೆ.
ಈ ವರ್ಷಾರಂಭ ರಶ್ಮಿಕಾ ಮಂದಣ್ಣ ಗಾಯಗೊಂಡರು. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಗಾಯಗೊಂಡಿರುವುದಾಗಿ ಸ್ವತಃ ಮಾಹಿತಿ ಒದಗಿಸಿದರು. ಗಾಯಗೊಂಡ ನಂತರ, ನಟಿ ಕೆಲ ದಿನಗಳ ಕಾಲ ಚಿತ್ರೀಕರಣದಿಂದ ದೂರವಿದ್ದರು. ತಮ್ಮ ಇತ್ತೀಚಿನ ಛಾವಾ ಸಿನಿಮಾ ಬಿಡುಗಡೆ ಸಂದರ್ಭ ಪ್ರಚಾರಗಳಲ್ಲಿ ವೀಲ್‌ಚೇರ್ ಸಹಾಯದಿಂದ ಭಾಗವಹಿಸಿದರು. ವಿಕ್ಕಿ ಕೌಶಲ್ ಜೊತೆ ನಟಿಸಿದ ‘ಛಾವಾ’ ಭಾರಿ ಯಶಸ್ಸು ಕಂಡಿದೆ. ಇದೀಗ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡಿರುವ ‘ಸಿಕಂದರ್’ ಬಿಡುಗಡೆಗೆ ಸಜ್ಜಾಗಿದೆ. ಇನ್ನೂ ‘ಕುಬೇರ’, ‘ದಿ ಗರ್ಲ್‌ಫ್ರೆಂಡ್’ ಮತ್ತು ‘ರೈನ್ಬೋ’ ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ.
ನನಗೆ ಗೊತ್ತಿರುವ ಏಕೈಕ ಮಾಹಿತಿ ಎಂದರೆ ಅದು ಬಿಡುಗಡೆ ದಿನಾಂಕ: ಕುಬೇರ ಚಿತ್ರದ ಬಗ್ಗೆ ಏನಾದರೂ ಮಾಹಿತಿ ನೀಡುವಿರ? ಎಂಬ ಅಭಿಮಾನಿಯ ಪ್ರಶ್ನೆಗೆ, ರಶ್ಮಿಕಾ ಮಂದಣ್ಣ ಚಿತ್ರದ ಬಗ್ಗೆ ನನಗೆ ತಿಳಿದಿರುವ ಏಕೈಕ ಅಪ್ಡೇಟ್ ಅಂದ್ರೆ ಅದು ಬಿಡುಗಡೆ ದಿನಾಂಕ. ಸಿನಿಮಾ ಜೂನ್ 20 ರಂದು ಬಿಡುಗಡೆಯಾಗಲಿದೆ. ಬಹಳ ವಿಭಿನ್ನ ಸಿನಿಮಾ. ನಿಮ್ಮಂತೆಯೇ ನಾನೂ ಕೂಡಾ ಸಿನಿಮಾ ನೋಡಲು ಬಹಳ ಉತ್ಸುಕಳಾಗಿದ್ದೇನೆ ಎಂದು ತಿಳಿಸಿದರು.
ರಶ್ಮಿಕಾ ಇಷ್ಟದ ಸಿನಿಮಾ ಯಾವುದು?: ಇನ್ನೂ ತಮ್ಮಿಷ್ಟದ ಸಿನಿಮಾ ಬಗ್ಗೆ ಮಾತನಾಡುತ್ತಾ, ನಾನು ‘ಲವ್ ಸ್ಕಾಟ್’ ಡ್ರಾಮಾವನ್ನು ಈಗಷ್ಟೇ ಮುಗಿಸಿದ್ದೇನೆ. ‘ಫಸ್ಟ್ ಫ್ರಾಸ್ಟ್’ ಎಂಬ ಚೀನೀ ಡ್ರಾಮಾ ಕೂಡಾ ಚೆನ್ನಾಗಿದೆ. ಪ್ರಸ್ತುತ ‘ಅಂಡರ್‌ಕವರ್ ಹೈಸ್ಕೂಲ್’ ವೀಕ್ಷಿಸುತ್ತಿದ್ದೇನೆ. ನಾನು ಈವರೆಗೆ ಅನೇಕ ಕೊರಿಯನ್ ಡ್ರಾಮಾಗಳನ್ನು ನೋಡಿದ್ದೇನೆ. ನನಗೆಲ್ಲವೂ ಹಿಡಿಸಿದೆ ಎಂದು ತಿಳಿಸಿದರು.
ಸಲ್ಮಾನ್ ಖಾನ್ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ ‘ಸಿಕಂದರ್’ ಇದೇ ಭಾನುವಾರ, ಮಾರ್ಚ್ 30ರಂದು ಬಿಡುಗಡೆಯಾಗಲಿದೆ. ಛಾವಾ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿರುವ ರಶ್ಮಿಕಾ ಅವರಿಗೆ ಮತ್ತೊಂದು ಸೂಪರ್ ಹಿಟ್ ಸಿಗುವ ಭರವಸೆ ಇದೆ. ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಸಹಯೋಗದೊಂದಿಗೆ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದು, ಎ.ಆರ್ಮುರುಗದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.