ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮತ್ತೊಮ್ಮೆ ಸೋಲನುಭವಿಸಿದೆ. ನಿನ್ನೆ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನವನ್ನು 8 ವಿಕೆಟ್ಗಳಿಂದ ಮಣಿಸಿ ಗೆಲುವು ಸಾಧಿಸಿದೆ.
ಐಪಿಎಲ್ 2025ರ ಋತುವಿನ ಮೊದಲ ಮೂರು ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಬದಲಿಗೆ ರಿಯಾನ್ ಪರಾಗ್ ನಾಯಕರಾಗಿದ್ದಾರೆ. ಆದಾಗ್ಯೂ, ಆಡಿದ ಎರಡೂ ಪಂದ್ಯಗಳಲ್ಲಿ ರಾಜಸ್ಥಾನ ಸೋಲು ಕಂಡಿದೆ. ಇದರ ಬೆನ್ನಲ್ಲೆ ಪರಾಗ್ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಅದರಲ್ಲೂ ನಿನ್ನೆಯ ಪಂದ್ಯದಲ್ಲಿ ಪರಾಗ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೆಟರ್ ಸೈಮನ್ ಡುಲ್ ಅಸಮಾಧಾನ ಹೊರಹಾಕಿದ್ದಾರೆ.
ಬ್ಯಾಟಿಂಗ್ ಆರ್ಡರ್ ಸೆಟ್ ಮಾಡಲು ಕಷ್ಟಪಡ್ತಿದ್ದಾರೆ: ತಂಡ ಸಂಕಷ್ಟದ ಸಮಯದಲ್ಲಿ ಯಾವ ಬ್ಯಾಟರ್ಗಳಿಗೆ ಕಳುಹಿಸಬೇಕು ಎಂದು ತಿಳಿಯಲು ನಾಯಕ ರಿಯಾನ್ ಕಷ್ಟಪಡುತ್ತಿರುವಂತೆ ತೋರುತ್ತಿದೆ. ₹11 ಕೋಟಿಗೆ ರಾಜಸ್ಥಾನ ತಂಡದಲ್ಲಿ ಉಳಿಸಿಕೊಂಡಿರುವ ಸ್ಟಾರ್ ಆಟಗಾರ ಶಿಮ್ರಾನ್ ಹೆಟ್ಮೆಯರ್ ಅವರನ್ನು ಎಂಟನೇ ಸ್ಥಾನದಲ್ಲಿ ಆಡಿಸಲಾಗುತ್ತದೆಯೇ?. ಕೆರಿಬಿಯನ್ ಲೀಗ್‌ನಲ್ಲಿ, ಹೆಟ್ಮೆಯರ್ ಹೆಚ್ಚಾಗಿ ಒನ್ ಡೌನ್ ಅಥವಾ ಸೆಕೆಂಡ್ ಡೌನ್‌ನಲ್ಲಿ ಆಡುತ್ತಾರೆ. ಅಂತಹ ಸ್ಟಾರ್ ಆಟಗಾರನನ್ನು ಏಕೆ ಕೆಳ ಕ್ರಮಾಂಕದಲ್ಲಿ ಕಳುಹಿಸಲಾಗುತ್ತಿದೆ?.
ಇಂಪ್ಯಾಕ್ಟ್ ಪ್ಲೇಯರ್ಗಿಂತ ಮೊದಲು ಬ್ಯಾಟಿಂಗ್ಗೆ ಇಳಿಸಬೇಕು: ಹೆಟ್ಮೆಯರ್ ಉಳಿಸಿಕೊಳ್ಳಲು ರಾಜಸ್ಥಾನ ₹11 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಅವರನ್ನು ಎಂಟನೇ ಸ್ಥಾನದಲ್ಲಿ ಆಡಿಸುತ್ತಿದ್ದಾರೆ. ಈ ನಿರ್ಧಾರ ಅತ್ಯಂತ ಕೆಟ್ಟದಾಗಿದೆ. ಹೆಟ್ಮೆಯರ್ ಹೊಡಿಬಡಿ ಆಟದಿಂದ ರನ್ ಗಳಿಸಬಲ್ಲ ಬ್ಯಾಟರ್. ಇಂಪ್ಯಾಕ್ಟ್ ಪ್ಲೇಯರ್ಗೂ ಮುನ್ನ ಅವರಿಗೆ ಬ್ಯಾಟಿಂಗ್ಗೆ ಕಳುಹಿಸಬೇಕು. ಒಂದು ವೇಳೆ ವಿಫಲವಾದರೆ ಇಂಪ್ಯಾಕ್ಟ್ ಪ್ಲೇಯರ್ ಇದ್ದೇ ಇರುತ್ತಾರೆ.
ಎರಡೂ ಪಂದ್ಯಗಳಲ್ಲಿ ತೆಗೆದುಕೊಂಡ ನಿರ್ಧಾರ ಸರಿಯಿರಲಿಲ್ಲ: ಮೊದಲ ಎರಡು ಪಂದ್ಯಗಳಿಗೆ ರಾಜಸ್ಥಾನ್ ರಾಯಲ್ಸ್ ತೆಗದುಕೊಂಡ ನಿರ್ಣಯಗಳು ಸರಿ ಇರಲಿಲ್ಲ. ವಿಭಿನ್ನ ತಂತ್ರಗಳನ್ನು ರೂಪಿಸುವುದರ ಜೊತೆಗೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ನಿನ್ನೆಯ ಪಂದ್ಯದಲ್ಲಿ ಹೆಟ್ಮೆಯರ್ ಐದು ಅಥವಾ ಆರನೇ ಸ್ಥಾನದಲ್ಲಿ ಬಂದಿದ್ದರೂ ಹೆಚ್ಚಿನ ರನ್ ಗಳಿಸುತ್ತಿದ್ದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಶುಭಂ ದುಬೆ ಆಡುವ ಅಗತ್ಯವಿರುತ್ತಿರಲಿಲ್ಲ ಎಂದು ಡುಲ್ ಅಸಮಾಧಾನ ಹೊರಹಾಕಿದರು.