ಹೈದರಾಬಾದ್: ಜನಪ್ರಿಯ ಗಾಯಕಿ ಎಸ್.ಜಾನಕಿ ಅವರ ಪುತ್ರ, ಖ್ಯಾತ ಭರತನಾಟ್ಯ ಕಲಾವಿದ ಮುರಳಿಕೃಷ್ಣ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮುರಳಿಕೃಷ್ಣ ಹೈದರಾಬಾದ್ ನಲ್ಲಿರುವ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಭರತನಾಟ್ಯ ಕಲಾವಿದರಾಗಿದ್ದ ಮುರಳಿಕೃಷ್ಣ ಹಲವು ಶೋಗಳನ್ನು ನಡೆಸಿದ್ದರು. ಅನೇಕ ಸಿನಿಮಾಗಳಿಗೆ ಭರತನಾಟ್ಯ ಕ್ರೊರಿಯೋಗ್ರಫಿಯನ್ನು ಮಾಡಿದ್ದರು.
ಭರತನಾಟ್ಯ ಹಾಗೂ ಕುಚಿಪುಡಿ ನೃತ್ಯಗಾತಿ ಉಮಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಆದರೆ ಉಮಾ ಹಾಗೂ ಮುರಳಿಕೃಷ್ಣ ವಿಚ್ಛೇದನ ಪಡೆದು ದೂರಾಗಿದ್ದರು ಎನ್ನಲಾಗಿದೆ.
ಮುರಳಿಕೃಷ್ಣ ಕೆಲ ವರ್ಷಗಳ ಕಾಲ ಮೈಸೂರಿನಲ್ಲಿ ವಾಸವಾಗಿದ್ದರು. ಈ ವೇಳೆ ತಾಯಿ ಎಸ್.ಜಾನಕಿ ಕೂಡ ಮೈಸೂರಿನಲ್ಲಿ ಇದ್ದರು. ಬಳಿಕ ಹೈದರಾಬಾದ್ ನಲ್ಲಿ ಎಸ್.ಜಾನಕಿಯವರ ಮನೆಯಲ್ಲಿ ಇದ್ದರು.
ಇಂದು ಹೈದರಾಬಾದ್ ನ ಮನೆಯಲ್ಲಿಯೇ ಮುರಳಿಕೃಷ್ಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮುರಳಿಕೃಷ್ಣ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು, ನೃತ್ಯಗಾರರು ಕಂಬನಿ ಮಿಡಿದಿದ್ದಾರೆ. ಮಗನನ್ನು ಕಳೆದುಕೊಂಡಿರುವ ಎಸ್.ಜಾನಕಿಯವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಾರೆ.




