ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಫೆಬ್ರವರಿ 14 ರಂದು ಆರು ವರ್ಷದ ಹಿಮಾ ಎಂಬ ಹೆಸರಿನ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಉದ್ಯಾನವನ ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾ 2024ರ ಜೂನ್ನಲ್ಲಿ ಮೊದಲ ಬಾರಿಗೆ ಮರಿಗಳಿಗೆ ಜನ್ಮ ಈಗ ಎರಡನೇ ಬಾರಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡುವ ಮೂಲಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ತಾಯಿ ಹುಲಿ ಹಾಗೂ ಮರಿಗಳು ಆರೋಗ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಉದ್ಯಾನವನದಲ್ಲಿ ಮತ್ತೊಂದು ಸಂತಸದ ಸುದ್ದಿ ಎಂದರೆ ಫೆಬ್ರವರಿ 16 ರಂದು ಅರುಣ್ಯ ಎಂಬ ಹೆಸರಿನ ಹುಲಿ ಮೊದಲ ಬಾರಿಗೆ ಎರಡು ಮರಿಗಳಿಗೆ ಜನ್ಮ ನೀಡಿದೆ. ಈ ಹುಲಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಚೆನ್ನೈನ ಅರಿಗ್ನಾರ್ ಅನ್ನಾ ಪ್ರಾಣಿಶಾಸ್ತ್ರ ಉದ್ಯಾನವನದಿಂದ ತರಿಸಲಾಗಿತ್ತು.
ಅರುಣ್ಯ ಮತ್ತು ಅದರ ಎರಡು ಮರಿಗಳು ಸಹ ಆರೋಗ್ಯವಾಗಿದ್ದು, ಉದ್ಯಾನವನದ ಸಿಬ್ಬಂದಿ ಅವುಗಳ ಆರೈಕೆಯಲ್ಲಿ ತೊಡಗಿದ್ದಾರೆ. ಒಟ್ಟಾರೆಯಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಂದೇ ವಾರದಲ್ಲಿ ಆರು ಹುಲಿ ಮರಿಗಳು ಜನಿಸಿರುವುದು ಸಂತಸದ ಅಲೆ ಮೂಡಿಸಿದೆ.




