ತುರುವೇಕೆರೆ: ಪಟ್ಟಣ ಪಂಚಾಯ್ತಿಗೆ ಸೇರಿದ ಸ್ವತ್ತು ಸಿರಿವಂತರ ಪಾಲಾಗಿರುವುದನ್ನು ಮಾಹಿತಿ ಹಕ್ಕಿನ ಆಧಾರದಲ್ಲಿ ಕಂಡುಹಿಡಿದು ಸರ್ಕಾರಿ ಆಸ್ತಿಯನ್ನು ಉಳಿಸುವ ಸಲುವಾಗಿ ತನಿಖೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ನಮ್ಮ ಮೇಲೆ ಕೆಲವು ಪಟ್ಟಣ ಪಂಚಾಯ್ತಿ ಸದಸ್ಯರುಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಚೆಂಡೂರು ಮೋಹನ್ ಕುಮಾರ್ ಆರೋಪಿಸಿದರು.
ಪಟ್ಟಣ ಪಂಚಾಯ್ತಿ ಎದುರು ಪತ್ರಿಕಾಗೋಷ್ಟಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ ಪಟ್ಟಣ ಪಂಚಾಯ್ತಿಯ ಆಡಳಿತದ ಬಗ್ಗೆ ದಾಖಲೆ ಸಹಿತ ಆರೋಪಗಳ ಸುರಿಮಳೆಗೈದ ಅವರು, ನಮ್ಮ ಹೋರಾಟ ಯಾವುದೇ ವೈಯಕ್ತಿಕ ಹಿತಾಸಕ್ತಿಗಲ್ಲ, ಸರ್ಕಾರಿ ಆಸ್ತಿಯನ್ನು ಉಳಿಸುವುದಕ್ಕಾಗಿ ಮಾಡುತ್ತಿರುವ ಹೋರಾಟವಾಗಿದ್ದು, ಈ ರೀತಿಯ ಗೊಡ್ಡು ಬೆದರಿಕೆಗಳಿಗೆಲ್ಲಾ ನಾವು ಹೆದರುವುದಿಲ್ಲ, ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು. ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಕೋಟೆ ದಿಣ್ಣೆ ರಸ್ತೆಯಲ್ಲಿ ಖಾತೆ ನಂಬರ್ 535 ಮತ್ತು 536 ನಂಬರ್ ನಲ್ಲಿ 45*35 ಪುರಸಭೆ ಸ್ವತ್ತನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಪಪಂಗೆ, ಲೋಕಾಯುಕ್ತಕ್ಕೆ, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ಜನತಾ ಕ್ಲಿನಿಕ್ ಮುಂಭಾಗ ಕೋಟ್ಯಾಂತರ ರೂ ಬೆಲೆ ಬಾಳುವ ಸ್ವತ್ತನ್ನು ಯಾವುದೇ ಹರಾಜು ಪ್ರಕ್ರಿಯೆ ಇಲ್ಲದೆ ಖಾಸಗಿಯವರಿಗೆ ಖಾತೆ ಮಾಡಿಕೊಡಲಾಗಿದೆ. ಈ ಸಂಬಂಧ ಲೋಕಾಯುಕ್ತ ಹಾಗೂ ಯೋಜನಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ. ಕೆರೆ ರಸ್ತೆಯಲ್ಲಿ 196 ಅಡಿಗೆ ಹೊಸ ಖಾತೆ ಸೃಷ್ಟಿಸಲಾಗಿದೆ. ದಾಖಲೆಗಳಲ್ಲಿ ಪುರಸಭೆ ಸ್ವತ್ತು ಎಂದು ಬರೆದಿದ್ದನ್ನು ರೌಂಡ್ ಮಾಡಿ ಬೇರೆಯವರಿಗೆ ಖಾತೆ ಮಾಡಿರುವುದಕ್ಕೆ ಸೂಕ್ತ ದಾಖಲೆಯಿದೆ. ಕೆ.ಬಿ.ಕ್ರಾಸ್ ರಸ್ತೆಯ ಟೋಲ್ ಗೇಟ್ ಬಳಿ ಪಟ್ಟಣ ಪಂಚಾಯ್ತಿ ಸ್ವತ್ತು ಕಬಳಿಕೆಯಾಗಿದ್ದರೂ ತೆರವು ಪ್ರಕ್ರಿಯೆ ನಡೆಸಿಲ್ಲ. ಬೆಳ್ಳಿ ಪೆಟ್ರೋಲ್ ಬಂಕ್ ಪಕ್ಕ 1750 ಅಡಿ ಪಟ್ಟಣ ಪಂಚಾಯ್ತಿಗೆ ಸೇರಿದ ಸ್ವತ್ತನ್ನು ಬೇರೆಯವರಿಗೆ ಖಾತೆ ಮಾಡಿದ್ದಾರೆ ಎಂದು ದೂರಿದರು.
ಪಟ್ಟಣ ಪಂಚಾಯ್ತಿ ವತಿಯಿಂದ ಪಟ್ಟಣದ ಟೌನ್ ಬ್ಯಾಂಕ್ ಗೆ ಕಳೆದ 20 ವರ್ಷಗಳ ಹಿಂದೆ ಸುಮಾರು 25 ಲಕ್ಷರೂಗಳನ್ನು ಠೇವಣಿ ಇಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಬ್ಯಾಂಕ್ ಹಣವನ್ನು ಪಪಂಗೆ ಹಿಂದಿರುಗಿಸಿರಲಿಲ್ಲ. ಆದರೆ ಈಗ ಬ್ಯಾಂಕ್ನ ಆಡಳಿತ ಮಂಡಳಿ ಕೇವಲ ಅಸಲು ಹಣವನ್ನು ಮಾತ್ರ ಪಟ್ಟಣ ಪಂಚಾಯ್ತಿಗೆ ವಾಪಸ್ ಮಾಡಲು ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 20 ವರ್ಷಕ್ಕೆ ಯಾವುದೇ ಬಡ್ಡಿ ಇಲ್ಲದೆ ಅಸಲನ್ನು ಮಾತ್ರ ಪಡೆಯಲು ಮುಂದಾಗಿರುವ ಪಪಂ ಆಡಳಿತ ಮಂಡಳಿ, ಅಧಿಕಾರಿಗಳ ನಿರ್ಧಾರದ ಮರ್ಮ ಏನು ಎಂಬುದು ಬಹಿರಂಗವಾಗಬೇಕಿದೆ. ಪಪಂ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ, ಅಧಿಕಾರಿಗಳ ನಡುವಿನ ಒಳ ಒಪ್ಪಂದದ ವಿರುದ್ದ ಹೋರಾಟ ನಡೆಸಲಾಗುವುದು ಎಂದರು.
ಮುಂದಿನ 15 ದಿನದೊಳಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವಿಶೇಷ ತನಿಖಾ ತಂಡ ರಚಿಸಿ ಪಪಂಯಲ್ಲಿನ ಲೋಪಗಳ ಬಗ್ಗೆ ತನಿಖೆ ನಡೆಸಿ, ಸಿರಿವಂತರ ಪಾಲಾಗಿರುವ ಪಪಂ ಸ್ವತ್ತನ್ನು ಸ್ವಾಧೀನಕ್ಕೆ ಪಡೆಯದಿದ್ದರ ಪಪಂ ಮುಂಭಾಗ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಕೃಷ್ಣಮಾದಿಗ ಮಾತನಾಡಿ, ಈ ಹಿಂದೆ ಪಪಂ ನಿರ್ಲಕ್ಷ್ಯದಿಂದ ಅಂಬೇಡ್ಕರ್ ಭವನದ ನಿವೇಶನ ಒತ್ತುವರಿಯಾಗಿತ್ತು. ಈ ಬಗ್ಗೆ ಸಮಿತಿ ಪಪಂ ಎದುರು ಹೋರಾಟ ನಡೆಸಿದ ನಂತರ ತೆರವುಗೊಳಿಸಲಾಗಿತ್ತು. ಈಗ ಮತ್ತೊಮ್ಮೆ ಪಪಂ ಅಧಿಕಾರಿಗಳ ನಿರ್ಲಕ್ಷ್ಯ ಬಯಲಾಗಿದೆ. ಪಪಂ ಸ್ವತ್ತು ಉಳ್ಳವರ ಪಾಲಾಗಿದೆ. ಈ ಬಗ್ಗೆ ಸಂಘ ಸಂಸ್ಥೆಗಳು, ನಾಗರೀಕರೊಡಗೂಡಿ ಉಗ್ರಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು, ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರೇಶ್, ತಾಲೂಕು ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಕನ್ನಡ ರಕ್ಷಣಾ ವೇದಿಕೆಯ ಮಂಜುನಾಥ್, ಕನ್ನಡಪರ ಸಂಘಟನೆಯ ವೆಂಕಟೇಶ್, ನರಸಿಂಹದೇವರು, ಹರೀಶ್ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್