ಬೆಳಗಾವಿ: ‘ಹೊಸ ವರ್ಷ ಬಂದಿದೆ, ಇನ್ಮುಂದೆಯಾದರೂ ಸರಿಯಾಗಿ ಕೆಲಸ ಮಾಡು’ ಎಂದು ತಾಯಿ ಹೇಳಿದ ಬುದ್ಧಿಮಾತನ್ನೇ ಅವಮಾನವಾಗಿ ಭಾವಿಸಿದ ಯುವಕನೊಬ್ಬ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ.
ಉಗರಖೋಡ ಗ್ರಾಮದ ನಿವಾಸಿ ಕಲ್ಮೇಶ ಕಾಜಗಾರ (24) ಮೃತಪಟ್ಟ ದುರ್ದೈವಿ. ಡಿಸೆಂಬರ್ 31ರ ರಾತ್ರಿ ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿರುವಾಗ, ಇತ್ತ ಕಲ್ಮೇಶನ ತಾಯಿ ಮಂಜುಳಾ ಅವರು ಮಗನ ಭವಿಷ್ಯದ ಬಗ್ಗೆ ಕಾಳಜಿಯಿಂದ ಮಾತನಾಡಿದ್ದರು.
‘ಹೊಸ ವರ್ಷದಿಂದಲಾದರೂ ಚೆನ್ನಾಗಿ ಕೆಲಸ ಮಾಡಿಕೊಂಡು ಬಾಳಪ್ಪಾ’ ಎಂದು ಕಿವಿಮಾತು ಹೇಳಿದ್ದರು. ಆದರೆ, ಈ ಮಾತಿನಿಂದ ತೀವ್ರವಾಗಿ ಮನನೊಂದ ಕಲ್ಮೇಶ, ತಕ್ಷಣವೇ ಮನೆಯಿಂದ ಹೊರಬಂದಿದ್ದಾನೆ.
ಗ್ರಾಮದ ಸರ್ಕಾರಿ ಶಾಲೆಯ ಆವರಣಕ್ಕೆ ತೆರಳಿದ ಕಲ್ಮೇಶ, ಅಲ್ಲಿ ಕೀಟನಾಶಕ ಸೇವಿಸಿದ್ದಾನೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಆತನನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಕಲ್ಮೇಶ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.




