Ad imageAd image

ಶೀಘ್ರ 8000 ಪಿಎಸ್‌ಐ ಹುದ್ದೆಗಳ ಭರ್ತಿ : ಸಿದ್ಧರಾಮಯ್ಯ 

Bharath Vaibhav
ಶೀಘ್ರ 8000 ಪಿಎಸ್‌ಐ ಹುದ್ದೆಗಳ ಭರ್ತಿ : ಸಿದ್ಧರಾಮಯ್ಯ 
siddaramaiah
WhatsApp Group Join Now
Telegram Group Join Now

ಮೈಸೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 4 ಸಾವಿರಕ್ಕೂ ಅಧಿಕ ಪಿಎಸ್‌ಐಗಳನ್ನು ನೇಮಕ ಮಾಡಿದೆ. ಖಾಲಿ ಇರುವ ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಸಲಿದ್ದು, 8000 ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿನ ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀಡೆಯಿಂದ ಓಡಾಡುವಂತಾದಾಗ ಮಾತ್ರ, ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು.

ಆದ್ದರಿಂದ ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಿಲ್ಲದೇ, ಕಾನೂನು ಸುವ್ಯವಸ್ಥೆಯನ್ನು ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ತರಬೇತಿಯಲ್ಲಿ ಕಲಿತಿದ್ದನ್ನು ಜ್ಞಾಪಕವಿಟ್ಟುಕೊಂಡು ಜೀವನದಲ್ಲಿ ಪಾಲಿಸಬೇಕು. ತರಬೇತಿಗಳು ಆಗಾಗ್ಗೆ ನಡೆಯಬೇಕಲ್ಲದೆ ತರಬೇತಿ ಜೀವನದ ಅಂಗವಾಗಬೇಕು. 377 ಸಬ್ ಇನ್ಸ್ ಪೆಕ್ಟರ್ ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದು, ಖಾಲಿಯಿದ್ದ 4,911 ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ. ಖಾಲಿ ಇರುವ 8000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದನ್ನು ಮಾಡಿಯೇ ತೀರುತ್ತೇವೆ. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ ಎಂದರು.

ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಾಗ ಸರ್ಕಾರ ಹಿಂದೆಮುಂದೆ ನೋಡುವುದಿಲ್ಲ. ಕೆಲಸದಲ್ಲಿರುವ ಸಂದರ್ಭದಲ್ಲಿ ಕುಟುಂಬದವರ ಯೋಚನೆ ಮಾಡುವ ಅಗತ್ಯವಿಲ್ಲ. ಸತ್ಯ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತೀರಿ ಎಂದು ನಂಬಿದ್ದೇನೆ.

ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ದಿಕ್ಕಿನಲ್ಲಿ ಆರಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು, ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು.

ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ಪರಿಣಾಮ ಮಾರಕವಾಗುತ್ತದೆ. ಇದನ್ನು ನಿರ್ಮೂಲನೆ ಮಾಡದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.

ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜೊತೆಗೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು.

ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಸೂಕ್ತ ತರಬೇತಿ ನೀಡಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣಬಲದಿಂದ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಂಥ ಆಮಿಷಗಳಿಗೆ ಒಳಗಾಗಬಾರದು, ಧೈರ್ಯದಿಂದ ಕೆಲಸ ಮಾಡಿ ಪೋಲಿಸ್ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದರು.

ಗೃಹ ಸಚಿವರಾದ ಜಿ.ಪರಮೇಶ್ವರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಸಲೀಂ ಅವರು ಈ ವೇಳೆ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!