ತುರುವೇಕೆರೆ: ಪಟ್ಟಣದ ಶ್ರೀ ಕೊಲ್ಲಾಪುರದಮ್ಮ, ಶ್ರೀ ಶನೇಶ್ಚರಸ್ವಾಮಿ, ಶ್ರೀ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 27 ರಂದು ಮಹಾಶಿವರಾತ್ರಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಂದ ಸಾರ್ವಜನಿಕರಿಗಾಗಿ ಅನ್ನದಾನ ಆಯೋಜಿಸಲಾಗಿತ್ತು.
ಫೆಬ್ರವರಿ 26 ಶಿವರಾತ್ರಿ ದಿನದಂದು ಬೆಳಿಗ್ಗೆ ದೇವಾಲಯದಲ್ಲಿನ ಎಲ್ಲಾ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ, ಮಹಾಮಂಗಳಾರತಿ ನೆರವೇರಿಸಿ ತೀರ್ಥಪ್ರಸಾದ ವಿನಿಯೋಗ ವಿತರಿಸಲಾಯಿತು. ಸಂಜೆ ಎಳ್ಳಿನ ರಾಶಿಯ ಮೇಲೆ ಶನೇಶ್ಚರ ಸ್ವಾಮಿಯನ್ನು ಕೂರಿಸಿ ನವಗ್ರಹ ಶಾಂತಿ ಹಾಗೂ ಇತರೆ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಫೆಬ್ರವರಿ 27ರಂದು ಮಧ್ಯಾಹ್ನ 12 ಗಂಟೆಗೆ ಗೋಪೂಜೆ ನಡೆಸಿ, ಸಾರ್ವಜನಿಕರಿಗೆ ಅನ್ನದಾನ ನಡೆಸಲಾಯಿತು. ಸುಮಾರು 500 ಕ್ಕೂ ಅಧಿಕ ಭಕ್ತರು ಶ್ರೀ ಕೊಲ್ಲಾಪುರದಮ್ಮ ಹಾಗೂ ಇತರೆ ದೇವರ ದರ್ಶನ ಮಾಡಿ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಸಂಜೆ 6 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಕೊಲ್ಲಾಪುರದಮ್ಮ, ಶ್ರೀ ಶನೇಶ್ಚರಸ್ವಾಮಿ, ಶ್ರೀ ಚಾಮುಂಡೇಶ್ವರಿ ದೇವರ ಉತ್ಸವ ನೆರವೇರಲಿದೆ.
ಅನ್ನದಾನ ಕಾರ್ಯಕ್ರಮಕ್ಕೆ ಪಪಂ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಹಾಗೂ ಪಪಂ ಸದಸ್ಯ ಎನ್.ಆರ್.ಸುರೇಶ್ ವಿಶೇಷ ಸಹಕಾರ ನೀಡಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್, ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಟಿ.ವೈ. ನಾಗರಾಜು, ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಮಂಜಣ್ಣ, ಖಜಾಂಚಿಗಳಾದ ಪ್ರಭು, ಗಂಗಾಧರ್, ಪದಾಧಿಕಾರಿಗಳಾದ ಪಾರ್ವತಮ್ಮ, ಶಂಕರಪ್ಪ, ನವೀನ್ ಟಿ.ಕೆ., ವೆಂಕಟೇಶ್, ನವೀನ್ ಕುಮಾರ್ ಟಿ.ಎನ್., ಅರ್ಚಕರಾದ ಸಂತೋಷ್, ನರಸಿಂಹ ಸೇರಿದಂತೆ ದೇವಸ್ಥಾನ ಸಮಿತಿಯ ಮಡಿವಾಳ ಮಾಚಿದೇವ ಯುವಕರ ಸಂಘದ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




