ತುರುವೇಕೆರೆ : ಹೊಳೆನರಸೀಪುರದ ಚಾಮುಂಡೇಶ್ವರಿ ಸೈಕಲ್ ಸರ್ಕಸ್ ತಂಡದವರು ತುರುವೇಕೆರೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ತಮ್ಮ ಕಲಾಪ್ರದರ್ಶನ ಮಾಡುವ ನಾಗರೀಕರನ್ನು ರಂಜಿಸಿದರು.
ಪಟ್ಟಣದ 12 ನೇ ವಾರ್ಡಿನ ಶ್ರೀರಾಮಮಂದಿರ ರಸ್ತೆಯಲ್ಲಿ ಮೂರು ಗೂಡ್ಸ್ ಆಟೋದಲ್ಲಿ ಸಂಜೆ ವೇಳೆಗೆ 8-10 ಬಂದಿಳಿದು, ಮೈಕಿನಲ್ಲಿ ತಮ್ಮ ಸರ್ಕಸ್ ಬಗ್ಗೆ ಪ್ರಕಟ ಮಾಡತೊಡಗಿದರು. ನಾವು ಬೀದಿಬದಿಯಲ್ಲಿ ಸರ್ಕಸ್, ನೃತ್ಯ ಮುಂತಾದ ಕಲೆಗಳನ್ನು ಪ್ರದರ್ಶಿಸಲಿದ್ದು, ಜೀವನ ನಡೆಸುವುದಕ್ಕಾಗಿ ಊರೂರು ಅಲೆಯುತ್ತಾ ಇಂದು ನಿಮ್ಮೂರಿಗೆ ಬಂದಿದ್ದೇವೆ. ನಮ್ಮ ಕಲಾ ಪ್ರದರ್ಶನ ನೋಡಿ, ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ನಮ್ಮ ಬದುಕಿನ ಬಂಡಿ ನಡೆಯುತ್ತದೆ ಎಂದು ವಿನಂತಿಸಿದರು.

ಸರ್ಕಸ್ ತಂಡದ ಪುಟ್ಟ ಹುಡುಗಿಯೊಂದು ಪ್ರಾರ್ಥನಾ ಗೀತೆ ಹಾಡಿದ್ದಲ್ಲದೆ ಚಲನಚಿತ್ರದ ದೃಶ್ಯವೊಂದಕ್ಕೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿತು. ಸರ್ಕಸ್ ತಂಡದ ಪ್ರತಿಯೊಬ್ಬರೂ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ.ರವಿಚಂದ್ರನ್, ಸುದೀಪ್, ದರ್ಶನ್ ಸೇರಿದಂತೆ ವಿವಿಧ ಕಲಾವಿದರ ಚಿತ್ರದ ಹಾಡುಗಳಿಗೆ ನೃತ್ಯ ಮಾಡಿದರು. ಇನ್ನೂ ಕೆಲವರು ಹಾಸ್ಯ ಸನ್ನಿವೇಶಗಳಲ್ಲಿ ಅಭಿನಯಿಸಿ ನಾಗರೀರನ್ನು ನಗೆಗಡಲಲ್ಲಿ ತೇಲಿಸಿದರು.
ಇಷ್ಟೆಲ್ಲಾ ಆದ ಮೇಲೆ ಸರ್ಕಸ್ ಪ್ರಾರಂಭವಾಯಿತು. ತಂಡದ ಪುರುಷ ಕಲಾವಿದರು ಬ್ರೇಕಿಲ್ಲದ, ಬೆಲ್ ಇಲ್ಲದ ಸೈಕಲ್ ಹತ್ತಿ ತುಳಿಯುತ್ತಾ ಮೂರು ನೀರು ತುಂಬಿದ ಬಿಂದಿಗೆಗಳನ್ನು ಎರಡನ್ನು ಕೈಯಲ್ಲಿ, ಒಂದು ಬಾಯಲ್ಲಿ ಹಿಡಿದು ಸೈಕಲ್ ಸವಾರಿ ಮಾಡಿದರು. ನಾಲ್ಕು ಪುಟ್ಟ ಮಕ್ಕಳನ್ನು ಚೌಕಾಕಾರದಲ್ಲಿ ಮಲಗಿಸಿ ಅವರ ಮಧ್ಯೆ ಸೈಕಲ್ ಹಿಂಬದಿ ಚಕ್ರ, ಅವರ ಆಚೆಗೆ ಒಂದು ಚಕ್ರ ಬರುವಂತೆ ಸೈಕಲ್ ತುಳಿದು ಆಶ್ಚರ್ಯ ಮೂಡಿಸಿದರು. ಬಹುಮುಖ್ಯವಾಗಿ ಅದೇ ಬ್ರೇಕಿಲ್ಲದ ಸೈಕಲಿನಲ್ಲಿ ಟೈರೊಂದಕ್ಕೆ ಬೆಂಕಿ ಹಚ್ಚಿ ಹಿಡಿದು ಸೈಕಲ್ ತುಳಿಯುತ್ತಲೇ ಸೈಕಲ್ ಚಕ್ರದ ಕೆಳಗಿನಿಂದ ಟೈರ್ ತೆಗೆಯುವ ಪ್ರದರ್ಶನವಂತೂ ನಾಗರೀಕರನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡುವಂತೆ ಮಾಡಿದರು. ಇನ್ನೂ ಹತ್ತಾರು ಕಲಾ ಪ್ರದರ್ಶನವನ್ನು ಸರ್ಕಸ್ ತಂಡ ನೀಡಿತು.
ಸರ್ಕಸ್ ತಂಡದ ಕಲಾ ಪ್ರದರ್ಶನವನ್ನು ಮೆಚ್ಚಿದ ವಿಷ್ಣುಸೇನಾ ಸಮಿತಿ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಬ್ರಾಹ್ಮಣರ ಬೀದಿ, ಕುರುಹಿನ ಶೆಟ್ಟರ ಬೀದಿ, ಮಡಿವಾಳರ ಬೀದಿ, ಬಾವಿಕೆರೆಯ ನಾಗರೀಕರು ತಮ್ಮ ಕೈಲಾದ ಧನಸಹಾಯವನ್ನು ಮಾಡಿ ಕಲಾವಿದರನ್ನು ಪ್ರೋತ್ಸಾಹಿಸಿದರು.
ವರದಿ: ಗಿರೀಶ್ ಕೆ ಭಟ್




