ಬೆಂಗಳೂರು: ದೇಶಿ – ವಿದೇಶಿ ಪ್ರವಾಸಿಗರ ಸುರಕ್ಷತೆ, ಭದ್ರತೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಂಪಿಯಲ್ಲಿ ವಿಶೇಷ ಪ್ರತ್ಯೇಕ ಪೊಲೀಸ್ ಉಪ ವಿಭಾಗ (ಡಿವೈಎಸ್ಪಿ) ಕಚೇರಿ ಆರಂಭಿಸುವಂತೆ ಶಾಸಕ ಜಿ.ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಜನಾರ್ದನ ರೆಡ್ಡಿ, ಹಂಪಿಯಲ್ಲಿ ಪೊಲೀಸ್ ಉಪ ವಿಭಾಗ ಕಚೇರಿ ಸ್ಥಾಪನೆ ಹಾಗೂ ಆನೆಗೊಂದಿಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪನೆಯ ಅಗತ್ಯ, ಮಹತ್ದದ ಬಗ್ಗೆ ಶಾಸಕ ರೆಡ್ಡಿ, ಸಿಎಂಗೆ ವಿವರಿಸಿದರು.
ವರ್ಷಕ್ಕೆ 40 ಲಕ್ಷ ಪ್ರವಾಸಿಗರು: ಹಂಪಿ ಹಾಗೂ ಆನೆಗೊಂದಿಯ ವಿಶ್ವವಿಖ್ಯಾತ ಮತ್ತು ಐತಿಹಾಸಿಕ ತಾಣಗಳಾಗಿವೆ. ಈ ತಾಣಗಳ ವೀಕ್ಷಣೆಗೆಂದು ಪ್ರತಿವರ್ಷ ದೇಶಾದ್ಯಂತದ ಸುಮಾರು 40 ಲಕ್ಷ ಪ್ರಮಾಣದಷ್ಟು ದೇಶಿ – ವಿದೇಶಿ ಪ್ರವಾಸಿಗರು ಬರುತ್ತಾರೆ. ಈ ಪೈಕಿ ವರ್ಷಕ್ಕೆ ಮೂರು ಲಕ್ಷ ವಿದೇಶಿ ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರ ರಕ್ಷಣೆ, ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ಪೊಲೀಸ್ ಠಾಣೆ ಅಗತ್ಯವಾಗಿದೆ. ಈ ಹಿಂದೆ ನಾನು ರಾಜ್ಯದ ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಹಂಪಿಯಲ್ಲಿ ಪ್ರತೇಕ ಪೊಲೀಸ್ ಉಪ ವಿಭಾಗ ಕಚೇರಿ ಸ್ಥಾಪಿಸಲಾಗಿತ್ತು. ವ್ಯಾಪ್ತಿಯಲ್ಲಿನ ಪ್ರವಾಸಿ ಸ್ಥಳಕ್ಕೆ ನಿತ್ಯ ಗಸ್ತು ತಿರುಗಲು ಪೊಲೀಸ್ ಸಿಬ್ಬಂದಿಗೆ ದ್ವಿಚಕ್ರವಾಹನಗಳ ವ್ಯವಸ್ಥೆಯೂ ಮಾಡಲಾಗಿತ್ತು. ಆದರೆ, ನಮ್ಮ ಸರ್ಕಾರದ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರ ಈ ಪೊಲೀಸ್ ವಿಭಾಗ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿತು. ಇದರಿಂದ ಹಂಪಿ – ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸುರಕ್ಷತೆಗೆ ಆತಂಕ ಎದುರಾಗಿದೆ ಎಂದು ರೆಡ್ಡಿ ವಿವರಿಸಿದರು.