ಮೊಳಕಾಲ್ಮುರು: ತಾಲೂಕಿನ ರಾಯಾಪುರದಲ್ಲಿ ಸೋಮವಾರ ಸಂಜೆ ಶ್ರೀ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ರಥೋತ್ಸವದ ಪ್ರಯುಕ್ತ ಬಸವೇಶ್ವರ ಸ್ವಾಮಿ ಹಾಗೂ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೂ ಮುಂಚಿತವಾಗಿ ನೂತನ ರಥಕ್ಕೆ ವಿವಿಧ ಬಣ್ಣದ ಬಾವುಟಗಳು ಮತ್ತು ಬೃಹತ್ ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು.
ಬೆಳಿಗ್ಗೆ ರಥಕ್ಕೆ ನಾನಾ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ ಬಲಿ ಅನ್ನ ಅರ್ಪಿಸಿ ಮಧ್ಯಾಹ್ನದಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ಊರು ಬಾಗಿಲಿನಿಂದ ಮುಖ್ಯ ರಸ್ತೆಯ ಮೂಲಕ ಪಾಂಡು ರಂಗಸ್ವಾಮಿ ದೇವಸ್ಥಾನದವರೆಗೂ ಎಳೆದೊಯ್ದು ವಾಪಾಸು ಕರೆ ತರಲಾಯಿತು. ರಥೋತ್ಸವ ಎಳೆಯುತ್ತಿರುವಾಗ ರಥಕ್ಕೆ ನೆರೆದಿದ್ದ ಭಕ್ತರು ಬಾಳೆಹಣ್ಣು ಸೂರು ಬೆಲ್ಲ ಮಂಡಕ್ಕಿ ಎರಚಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಭಾರೀ ಗಾತ್ರದ ಹೂವಿನ ಹಾರಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಬಾಳೆಹಣ್ಣು ಮಂಡಕ್ಕಿ, ಸೂರುಬೆಲ್ಲವನ್ನು ಭಕ್ತರು ರಥಕ್ಕೆ ಎರಚಿ ಭಕ್ತಿ ಸಮರ್ಪಿಸುತ್ತಿದ್ದರು. ರಥೋತ್ಸವದಲ್ಲಿ ಕೋಲಾಟ, ನಂದಿಕೋಲು, ಡೊಳ್ಳು ಕುಣಿತ ಗಮನ ಸೆಳೆದವು. ರಥೋತ್ಸವದಲ್ಲಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ವರದಿ: ಪಿ.ಎಂ ಗಂಗಾಧರ




